ಮುಂಬಯಿ : ಜುಲೈ ತಿಂಗಳ ವಾಯಿದೆ ವಹಿವಾಟನ್ನು ಭರ್ಜರಿಯಾಗಿ ಆರಂಭಿಸಿರುವ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200 ಅಂಕಗಳ ಜಿಗಿತವನ್ನು ಸಾಧಿಸಿತು.
ನಿನ್ನೆ ಸಾರ್ವಕಾಲಿಕ ತಳ ಮಟ್ಟವನ್ನು ಕಂಡಿದ್ದ ರೂಪಾಯಿ ಇಂದು ಡಾಲರ್ ಎದುರು ಚೇತರಿಕೆಯನ್ನು ತೋರಿ 18 ಪೈಸೆಯಷ್ಟು ಸುಧಾರಿಸಿ 68.61 ರೂ.ಗೆ ನೆಗೆದುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿ ತೇಜಿಯ ವಾತಾವರಣ ಕಂಡು ಬಂತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 193.27 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,230.91 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ 64.30 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,653.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿತರವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್, ಆಯಿಲ್, ಗ್ಯಾಸ್ ಮತ್ತು ಕನ್ಸೂಮರ್ ಡ್ಯುರೇಬಲ್ ಕ್ಷೇತ್ರದ ಶೇರುಗಳು ಶೇ.2.03ರ ಏರಿಕೆಯನ್ನು ಕಂಡವು.
ಪ್ರಮುಖ ಗೇನರ್‌ಗಳಾದ ಟಾಟಾ ಸ್ಟೀಲ್, ಎಸ್‌ಬಿಐ, ಒಎನ್‌ಜಿಸಿ, ವೇದಾಂತ, ಆರ್‌ಐಎಲ್, ಲಾರ್ಸನ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್, ಕೋಲ್ ಇಂಡಿಯಾ, ಬಜಾಜ್ ಆಟೋ, ಎಸ್ ಬ್ಯಾಂಕ್ ಶೇರುಗಳು ಇಂದು ಶೇ.2.43ರ ಏರಿಕೆಯನ್ನು ದಾಖಲಿಸಿದವು.