ಮುಂಬಯಿ : ಹಣದುಬ್ಬರ ಅಂಕಿ ಅಂಶಗಳು ಧನಾತ್ಮಕವಾಗಿರುವುದು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 185 ಅಂಕಗಳ ಏರಿಕೆಯೊಂದಿಗೆ 37,829.93 ಅಂಕಗಳ ಮಟ್ಟಕ್ಕೆ ಏರಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹೊರತಾಗಿಯೂ ಭಾರತೀಯ ಶೇರು ಮಾರುಕಟ್ಟೆಗಳು ಇಂದು ಚೇತರಿಕೆ ತೋರಿದವು.
ಇಂದು ಬೆಳಗ್ಗೆ 10.20ರ ಸುಮಾರಿಗೆ ಸೆನ್ಸೆಕ್ಸ್ 162.37 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 37,807.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.20 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 11,408 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ನಿನ್ನೆ ಸೋಮವಾರ 1.08 ರೂ. ಸಾರ್ವಕಾಲಿಕ ಏಕದಿನ ನಷ್ಟವನ್ನು ಕಂಡಿದ್ದ ರೂಪಾಯಿ ಇಂದು 23 ಪೈಸೆಗಳ ಚೇತರಿಕೆಯನ್ನು ಇಂದು ದಾಖಲಿಸಿ 69.91 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್, ಎಚ್‌ಯುಎಲ್, ಏಶ್ಯನ್ ಪೇಂಟ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಟಾಟಾ ಮೋಟರ್, ಆರ್‌ಐಎಲ್ ಶೇರುಗಳು ಶೇ. 2.01ರ ಏರಿಕೆಯನ್ನು ಕಂಡವು.