ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಭರ್ಜರಿ ಜಿಗತವನ್ನು ದಾಖಲಿಸಿ ಹೊಸ ದಾಖಲೆಯ ಎತ್ತರವಾಗಿ 37,293.41 ಅಂಕಗಳ ಮಟ್ಟವನ್ನು ತಲುಪಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77 ಅಂಕಗಳ ಮುನ್ನಡೆಯನ್ನು ದಾಖಲಿಸಿ 11,244.30 ಅಂಕಗಳ ಮಟ್ಟವನ್ನು ತಲುಪಿತು.
ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ ಒಟ್ಟು 633.41 ಅಂಕಗಳನ್ನು ಸಂಪಾದಿಸಿದೆ.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 290.58 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,275.2 ಅಂಕಗಳ ಮಟ್ಟದಲ್ಲೂ, ನಿಫ್ಟಿ 73.60 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 11,240.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಜೂನ್ ತ್ತೈಮಾಸಿಕದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ಐಟಿಸಿ ಶೇರು ಇಂದು ಉತ್ತಮ ಏರಿಕೆಯನ್ನು ಕಂಡಿತು. ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ವಾತಾವರಣ ನೆಲೆಸಿರುವುದು ಮತ್ತು ವಿದೇಶಿ ಬಂಡವಾಳದ ಒಳಹರಿವಿನಲ್ಲಿ ದೃಢತೆ ತೋರಿಬಂದಿರುವುದು ಮತ್ತು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶ ಹೊರ ಬರುತ್ತಿರುವುದು – ಶೇರು ಮಾರುಕಟ್ಟೆಯ ತೇಜಿಗೆ ಕಾರಣವಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಏಶ್ಯನ್ ಪೇಂಟ್, ಕೋಟಕ್ ಬ್ಯಾಂಕ್, ಭಾತಿರ ಏರ್‌ಟೆಲ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ವೇದಾಂತ, ವಿಪ್ರೋ ಶೇರುಗಳು ಶೇ.3ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಸುಧಾರಿಸಿ 68.60 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.