ಮುಂಬಯಿ : ಆರ್‌ಬಿಐ ನಿರ್ದೇಶಕರ ಮಂಡಳಿ ಸಭೆ ಇಂದು ಸೋಮವಾರ ನಡೆಯಲಿಕ್ಕಿರುವ ಮುನ್ನವೇ ಆಶಾಭಾವನೆಯನ್ನು ಬೆಳೆಸಿಕೊಂಡ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 317.72 ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು ಆರು ವಾರಗಳ ಎತ್ತರವಾಗಿ 35,774.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 81.20 ಅಂಕಗಳ ಮುನ್ನಡೆ ಸಾಧಿಸಿ ದಿನದ ವಹಿವಾಟನ್ನು 10,763.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಐರೋಪ್ಯ ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿನ ಧನಾತ್ಮಕತೆ ಮತ್ತು ವಿದೇಶಿ ಬಂಡವಾಳದ ಹೊಸ ಒಳ ಹರಿವಿನ ಆಧಾರದಲ್ಲಿ ಮುಂಬಯಿ ಶೇರು ಪೇಟೆ ಇಂದು ತೇಜಿಯನ್ನು ಕಂಡಿತು.
ಇಂದಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಐಟಿಸಿ, ಟಾಟಾ ಮೋಟರ್, ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್ ಮತ್ತು ವೇದಾಂತ ಶೇರುಗಳು ಶೇ.7.19ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,794 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,327 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,275 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 192 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.
ಆರ್‌ಬಿಐ ಮತ್ತು ಕೇಂದ್ರ ಸರಕಾರದ ನಡುವಿನ ಜಟಾಪಟಿ ಹಾಗೂ ಸರಕಾರದ ಮುಂದಿನ ನೀತಿ ನಿರ್ಧಾರಗಳ ಪ್ರಕ್ರಿಯೆ ವಿಧಾನ ಇವೇ ಮೊದಲಾದ ನಿರ್ಣಾಯಕ ವಿಷಯಗಳು ಇಂದಿನ ಆರ್‌ಬಿಐ ನಿರ್ದೇಶಕರ ಮಂಡಳಿಯಲ್ಲಿ ಚರ್ಚೆಯಾಗಲಿದೆ.