ಮುಂಬಯಿ : ”ಆರ್‌ಬಿಐ ಸ್ವಾಯತ್ತೆ ಮುಖ್ಯ;ಆದರೆ ಅದರ ಕಾರ್ಯನಿರ್ವಹಣೆಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಆರ್ಥಿಕತೆಯ ಮಾರ್ಗದರ್ಶನ ಅಗತ್ಯವಿರುತ್ತದೆ” ಎಂಬ ಸಮನ್ವಯದ ನಿಲುವನ್ನು ಕೇಂದ್ರ ಸರಕಾರ ಪ್ರಕಟಿಸಿದ ಬೆನ್ನಿಗೇ ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ತನ್ನ ಎಲ್ಲ ನಷ್ಟವನ್ನು ನೀಗಿಸಿಕೊಂಡು ದಿನಾಂತ್ಯಕ್ಕೆ 550.92 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ 34,442.05 ಅಂಕಗಳ ಮಟ್ಟಕ್ಕೆ ಏರಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 188.20 ಅಂಕಗಳ ಮುನ್ನಡೆಯನ್ನು ದಾಖಲಿಸಿದ ದಿನದ ವಹಿವಾಟನ್ನು 10,386.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶದ ಹಣಕಾಸು ವ್ಯವಸ್ಥೆಯ ಮತ್ತು ಎನ್ ಬಿ ಎಫ್ ಸಿ ಗಳ ನಗದು ಲಭ್ಯತೆಯನ್ನು ಸುಧಾರಿಸಲು, ದುರ್ಬಲ ಬ್ಯಾಂಕುಗಳಿಗೆ ಅಗತ್ಯ ಬಂಡವಾಳ ಪೂರೈಸಲು ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಸಾಲ ನೆರವು ನೀಡಲು ಕೇಂದ್ರ ಸರಕಾರ, ಆರ್‌ಬಿಐ ಕಾಯಿದೆಯ ಸೆ.7ನ್ನು ಪ್ರಯೋಗಿಸಲು ಮುಂದಾಗಿದೆ ಎಂದೂ, ಸರಕಾರ ಹಾಗೆ ಮಾಡಿದಲ್ಲಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವರೆಂದೂ ದಿನಪೂರ್ತಿ ವಾಣಿಜ್ಯ ಟಿವಿ ವಾಹಿನಿಗಳು ಗುಲ್ಲೆಬ್ಬಿಸಿದ್ದವು.
ಆದರೆ ಮಧ್ಯಾಹ್ನದ ಬಳಿಕ ಕೇಂದ್ರ ಸರಕಾರ ಆರ್‌ಬಿಐ ಸ್ವಾಯತ್ತೆಯನ್ನು ಎತ್ತಿ ಹಿಡಿದು ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ಸಾರ್ವಜನಿಕ ಹಿತಾಸಕ್ತಿಯಲ್ಲಿ ಪಾಲಿಸಬೇಕಾಗಿದೆ ಎಂಬ ಸಮನ್ವಯದ ನಿಲುವನ್ನು ಪ್ರಕಟಿಸಿದಾಗ ಮುಂಬಯಿ ಶೇರು ಪೇಟೆಯಲ್ಲಿ ಏಕ್‌ದಂ ಜಿಗಿತ ಕಂಡು ಬಂತು.
ಕೇವಲ ಎಚ್ ಡಿ ಎಫ್ ಸಿ ಶೇರು 162.28 ಅಂಕಗಳ ಮುನ್ನಡೆಯನ್ನು (ಶೇ.6ರಷ್ಟು) ಸೆನ್ಸೆಕ್ಸ್‌ಗೆ ದೊರಕಿಸಿಕೊಟ್ಟದ್ದು ಇಂದಿನ ವಿಶೇಷವೆನಿಸಿತು. ಇದೇ ವೇಳೆ ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್, ಎಹ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಶೇ.4 ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,698 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,613 ಶೇರುಗಳು ಮುನ್ನಡೆ ಸಾಧಿಸಿದವು; 941 ಶೇರುಗಳು ಹಿನ್ನಡೆ ಕಂಡವು; 144 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಕೇಂದ್ರ ಸರಕಾರ ಈಚಿನ ವಾರಗಳಲ್ಲಿ ಆರ್‌ಬಿಐ ಗವರ್ನರ್‌ಗೆ ಪತ್ರ ಬರೆದು ಆರ್‌ಬಿಐ ಕಾಯಿದೆ ಸೆ.7ನ್ನು ಪ್ರಯೋಗಿಸಿದೆ. ತನ್ಮೂಲಕ ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ (ಎನ್‌ಬಿಎಫ್ಸಿ) ನಗದು ಲಭ್ಯತೆ, ದುರ್ಬಲ ಬ್ಯಾಂಕುಗಳಿಗೆ ಅಗತ್ಯ ಬಂಡವಾಳದ ಪೂರೈಕೆ ಮತ್ತು ಸಣ್ಣ ಹಾಗೂ ಮಧ್ಯಮ ಕಂಪೆನಿಗಳಿಗೆ ಸಾಲ ನೀಡುವಿಕೆಯ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿತ್ತು ಎನ್ನಲಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕದಲ್ಲಿ ಈ ತನಕ ಕೇಂದ್ರ ಸರಕಾರ, ಆರ್‌ಬಿಐ ಕಾಯಿದೆಯ ಸೆ.7ನ್ನು ಪ್ರಯೋಗಿಸಿದ್ದೇ ಇಲ್ಲ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಡಾಲರ್ ಎದುರು ರೂಪಾಯಿ ಅ.15ರಂದು 74.04 ರೂ. ಮಟ್ಟಕ್ಕೆ ಕುಸಿದ ತರುವಾಯ ನಿನ್ನೆ ಮಂಗಳವಾರ 73.99 ರೂ. ಮಟ್ಟಕ್ಕೆ ಜಾರಿದೆ. ಹತ್ತು ವರ್ಷದ ಸರಕಾರಿ ಬಾಂಡುಗಳು ಇಳುವರಿ ಶೇ.7.87ಕ್ಕೆ ಏರಿದೆ.