ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿನ ದುರ್ಬಲ ಪ್ರವೃತ್ತಿ ಮತ್ತು ಈಚಿನ ಲಾಭದ ನಗದೀಕರಣಕ್ಕಾಗಿ ವಹಿವಾಟುದಾರರಿಂದ ನಡೆದ ಶೇರು ಮಾರಾಟವೇ ಮೊದಲಾದ ಕಾರಣಗಳಿಂದ ಇಂದು ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 59 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಕಳೆದ ಮೂರು ದಿನಗಳ ನಿರಂತರ ಲಾಭದಾಯಕ ಓಟದಿಂದಾಗಿ ಸೆನ್ಸೆಕ್ಸ್ ಒಟ್ಟು 665.07 ಅಂಕಗಳನ್ನು ಸಂಪಾದಿಸಿತ್ತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ ಉತ್ತಮ ಚೇತರಿಕೆಯನ್ನು ಕಂಡು 99.04 ಅಂಕಗಳ ಏರಿಕೆಯೊಂದಿಗೆ 36,338.66 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.10 ಅಂಕಗಳ ಮುನ್ನಡೆಯೊಂದಿಗೆ 10,973.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಿಸಿಎಸ್, ಎಚ್ ಡಿ ಎಫ್ ಸಿ, ಇನ್‌ಫೋಸಿಸ್, ರಿಲಯನ್ಸ್, ಎಕ್ಸಿಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಿಸಿಎಸ್, ಭಾರ್ತಿ ಇನ್‌ಫ್ರಾಟೆಲ್, ಟೆಕ್ ಮಹೀಂದ್ರ, ಬಜಾಜ್ ಆಟೋ, ಎಕ್ಸಿಸ್ ಬ್ಯಾಂಕ್ ; ಟಾಪ್ ಲೂಸರ್‌ಗಳು ; ಕೋಲ್ ಇಂಡಿಯಾ, ವೇದಾಂತ, ಹಿಂಡಾಲ್ಕೋ, ಗೇಲ್, ಯುಪಿಎಲ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 5 ಪೈಸೆಯಷ್ಟು ಕುಸಿದು 68.87 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.