ಮುಂಬಯಿ : ನಿರಂತರ 7ನೇ ದಿನವೂ ಏರುಗತಿಯನ್ನು ಹಿಡಿದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 73 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಭಾರತೀಯ ಶೇರು ಮಾರುಕಟ್ಟೆಯತ್ತ ವಿದೇಶಿ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು, ಡಾಲರ್ ಎದುರು ರೂಪಾಯಿ ಬಲಗೊಳ್ಳುತ್ತಿರುವುದು, ಜಾಗತಿಕ ಶೇರು ಪೇಟೆಗಳು ಧನಾತ್ಮಕವಾಗಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಈಚಿನ ದಿನಗಳಲ್ಲಿ ನಿರಂತರ ತೇಜಿಯನ್ನು ಕಾಣುತ್ತಿದೆ.
ಇಂದು ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಸೆನೆಕ್ಸ್ 3.48 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,098.55 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 4.90 ಅಂಕಗಳ ನಷ್ಟದೊಂದಿಗೆ 11,457.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಮಾರುತಿ ಸುಜುಕಿ, ಎಸ್‌ಬಿಐ, ಸನ್ ಫಾರ್ಮಾ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಸಕ್ರಿಯವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 2 ಪೈಸೆಗಳ ಏರಿಕೆ ದಾಖಲಿಸಿ 68.51 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.