ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 184.98 ಅಂಕಗಳ ಜಿಗಿತವನ್ನು ಸಾಧಿಸಿ 37,876.87 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿತು. ಆದರೆ ಅನಂತರದಲ್ಲಿ ತೋರಿ ಬಂದ ಎಚ್ಚರಿಕೆಯ ನಡೆಯ ಪರಿಣಾಮವಾಗಿ ಸೆನ್ಸೆಕ್ಸ್ ಈ ಎತ್ತರದಿಂದ ಜಾರಿತು.
ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ಜಾಗತಿಕ ಆರ್ಥಿಕ ಸಮರಕ್ಕೆ ಕಾರಣವಾಗುವುದೆಂಬ ಭಯದಲ್ಲಿ ಶೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯ ನಡೆ ಕಂಡು ಬಂತು.
ಬೆಳಗ್ಗೆ 10.20ರ ಹೊತ್ತಿಗೆ ಸೆನ್ಸೆಕ್ಸ್ 51.35 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,743.25 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.60 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 11,402.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಐದು ಪೈಸೆಯ ಕುಸಿತ ಕಂಡು ಎರಡು ವಾರಗಳ ಕನಿಷ್ಠ ಮಟ್ಟವಾಗಿ 68.93 ರೂ. ಮಟ್ಟಕ್ಕೆ ಕುಸಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್, ಐಟಿ, ಆಟೋ, ಟೆಕ್, ಕನ್ಸೂಮರ್ ಡ್ನೂರೇಬಲ್, ರಿಯಲ್ಟಿ, ಆಯಿಲ್ ಆ್ಯಂಡ್ ಗ್ಯಾಸ್ ಕ್ಷೇತ್ರದ ಶೇರುಗಳು ಶೇ.1.46ರ ಮುನ್ನಡೆಯನ್ನು ಕಂಡವು.
ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಏಶ್ಯನ್ ಪೇಂಟ್, ಹಿಂಡಾಲ್ಕೊ, ಅಲ್‌ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಇಯಾ, ಗ್ರಾಸಿಂ ಮೂಡಿ ಬಂದವು. ಟಾಪ್ ಲೂಸರ್‌ಗಳಾಗಿ ಅದಾನಿ ಪೋರ್ಟ್, ಲೂಪಿನ್, ಸಿಪ್ಲಾ, ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್ ಶೇರುಗಳು ಹಿನ್ನಡೆಗೆ ಗುರಿಯಾದವು.