ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ತನ್ನ ನಿರಂತರ ಏಳನೇ ದಿನದ ಗೆಲುವಿನ ಓಟವನ್ನು ಇಂದು ಮಂಗಳವಾರವೂ ಮುಂದುವರಿಸಿ ದಿನದ ವಹಿವಾಟನ್ನು 36.95 ಅಂಕಗಳ ಏರಿಕೆಯೊಂದಿಗೆ ಹೊಸ ಸಾರ್ವಕಾಲಿಕ ಎತ್ತರವಾಗಿ 37,606.58 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟನಲ್ಲಿ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ಉದ್ದಕ್ಕೂ ಏರು ಪೇರನ್ನು ಕಾಣುತ್ತಲೇ ಸಾಗಿತು. ಆದರೆ ಕೊನೇ ತಾಸಿನ ವಹಿವಾಟಿನಲ್ಲಿ ರಿಲಯನ್ಸ್, ಎಚ್‌ಯುಎಲ್, ಇನ್‌ಫೋಸಿಸ ಮತ್ತು ಹೀರೋ ಮೊಟೋ ಕಾರ್ಪ್ ಶೇರುಗಳ ಭರಾಟೆಯ ಖರೀದಿ ನಡೆದು ಸೆನ್ಸೆಕ್ಸ್ ಮತ್ತೆ ಗೆಲುವಿನ ಹಾದಿಯತ್ತ ಹೊರಳಿತು.
ಸೆನ್ಸೆಕ್ಸ್‌ನಂತೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,356.50 ಅಂಕಗಳ ಹೊಸ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿತು. ನಿಫ್ಟಿ 50 ಹೊಸ ಹೊಸ ಎತ್ತರದ ದಾಖಲೆಯನ್ನು ಮಾಡುತ್ತಿರುವುದು ನಿರಂತರ ನಾಲ್ಕನೇ ದಿನದ ವಿದ್ಯಮಾನವಾಗಿದೆ.
ಇಂದು ರಿಲಯನ್ಸ್ ಶೇರು ದಾಖಲೆಯ 1,185.85 ರೂ. ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿರುವುದು ಗಮನಾರ್ಹವೆನಿಸಿತು. ಮಾರುಕಟ್ಟೆ ಬಂಡವಳೀಕರಣದಲ್ಲಿ ಗರಿಷ್ಠ ಮೌಲ್ಯದ ಕಂಪೆನಿಯಾಗಿ ಇಂದು ರಿಲಯನ್ಸ್ ಕಂಪೆನಿ ಟಿಸಿಎಸ್ ಅನ್ನು ಎರಡನೇ ಸ್ಥಾನಕ್ಕೆ ತಳ್ಳಿತು.
ಹೀರೋ ಮೋಟೋ ಕಾರ್ಪ್ ಶೇರು ಇಂದು ಶೇ.2.77ರಷ್ಟು ಏರಿದರೆ ಎಚ್‌ಯುಎಲ್ ಶೇರು ಶೇ.2.52ರಷ್ಟು ಏರಿ ಗಮನ ಸೆಳೆಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,808 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,494 ಶೇರುಗಳು ಮುನ್ನಡೆ ಸಾಧಿಸಿದವು; 1,159 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.