ಮುಂಬಯಿ: ಮುಂಬಯಿ ಶೇರು ಪೇಟೆಯಲ್ಲಿಂದು ಕೊನೇ ಕ್ಷಣದಲ್ಲಿ ಕಂಡು ಬಂದು ಹುಚ್ಚಾಪಟ್ಟೆ ಮಾರಾಟದ ಹೊರತಾಗಿಯೂ ಸೆನ್ಸೆಕ್ಸ್ ಸೂಚ್ಯಂಕ 28 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 32,186.41 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯದ ವೇಳೆಗೆ ಕೆಂಬಣಕ್ಕೆ ತಿರುಗಿ 13.75 ಅಂಕಗಳ ನಷ್ಟದೊಂದಿಗೆ 10,079.30 ಅಂಕಗಳ ಮಟ್ಟದಲ್ಲಿ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಐದು ದಿನಗಳ ನಿರಂತರ ಮುನ್ನಡೆಯನ್ನು ದಾಖಲಿಸಿದ್ದ ಸೆನ್ಸೆಕ್ಸ್ ಒಟ್ಟಾರೆಯಾಗಿ 524.44 ಅಂಕಗಳನ್ನು ಸಂಪಾದಿಸಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 176.85 ಅಂಕಗಳನ್ನು ಸಂಪಾದಿಸಿತ್ತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,023 ಶೇರುಗಳು ಮುನ್ನಡೆ ಸಾಧಿಸಿದರೆ 1,580 ಶೇರುಗಳು ಹಿನ್ನಡೆಗೆ ಗುರಿಯಾದವು; 156 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಸನ್ ಫಾರ್ಮಾ, ರಿಲಯನ್ಸ್, ಟಾಟಾ ಪವರ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡರೆ, ಐಟಿಸಿ, ಸಿಪ್ಲಾ, ಬಿಪಿಸಿಎಲ್, ಐಓಸಿ ಟಾಪ್ ಲೂಸರ್ ಎನಿಸಿಕೊಂಡವು.