ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನವಾಗಿ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿತು. ನಿನ್ನೆ ಗುರುವಾರ ಸೆನ್ಸೆಕ್ಸ್ 118.55 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಅಂತಾರಾಷ್ಟ್ರೀಯ ತೈಲ ದರ ಇಳಿಕೆ, ಡಾಲರ್ ಎದುರು ರೂಪಾಯಿ ಚೇತರಿಕೆ ಮತ್ತು ವಿದೇಶಿ ಬಂಡವಾಳದ ಹೊಸ ಒಳ ಹರಿವು ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆ ನಿರಂತರ ಎರಡನೇ ದಿನವಾಗಿ ಇಂದು ಶುಕ್ರವಾರ ಗರಿಗೆದರಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 259.53 ಅಂಕಗಳ ಏರಿಕೆಯೊಂದಿಗೆ 35,520.07 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.70 ಅಂಕಗಳ ಏರಿಕೆಯೊಂದಿಗೆ 10,687.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಡಾಲರ್ ಎದುರು ರೂಪಾಯಿ 10 ಪೈಸೆಯ ಚೇತರಿಕೆಯನ್ನು ಕಂಡು 71.87 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದುದು ಶೇರು ಮಾರುಕಟ್ಟೆಗೆ ಚೈತನ್ಯ ತುಂಬಿತು. ಇದೇ ವೇಳೆ ನಿನ್ನೆ ಗುರುವಾರ 2,043.06 ಕೋಟಿ ರೂ.ಗಳ ವಿದೇಶಿ ಬಂಡವಾಳ ಹರಿದು ಬಂದದ್ದು ಹೆಚ್ಚಿನ ಆತ್ಮವಿಶ್ವಾಸಕ್ಕೆ ಕಾರಣವಾಯಿತು.