ಹೊಸದಿಲ್ಲಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 11,000 ಅಂಕಗಳ ದೃಢತೆಯ ಮಟ್ಟವನ್ನು ದಾಟಿತು.
ಐಟಿ ಮತ್ತು ಮೆಟಲ್ ಶೇರುಗಳ ವ್ಯಾಪಕ ಖರೀದಿ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರ ಸಂಸ್ಥೆಗಳಿಂದ ಮುಂಚೂಣಿ ಶೇರುಗಳ ಖರೀದಿಯೇ ಮುಂಬಯಿ ಶೇರು ಪೇಟೆಯ ಇಂದಿನ ತೇಜಿಗೆ ಕಾರಣವಾಯಿತು.
ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 163.12 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,779.93 ಅಂಕಗಳ ಮಟ್ಟದಲ್ಲೂ, ನಿಫ್ಟಿ 49.10 ಅಂಕಗಳ ಮುನ್ನಡೆಯೊಂದಿಗೆ 10,983.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟೆಕ್ ಮಹೀಂದ್ರ, ಝೀ ಎಂಟರ್‌ಟೇನ್‌ಮೆಂಟ್, ರಿಲಯನ್ಸ್, ಎಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 8 ಪೈಸೆಗಳ ಏರಿಕೆಯನ್ನು ದಾಖಲಿಸಿ 71.49 ರೂ. ಮಟ್ಟದಲ್ಲಿ ಕಾರ್ಯನಿರತವಾಗಿತ್ತು.
ಇದೇ ಫೆ.7ರಂದು ಆರ್ ಬಿ ಐ ತನ್ನ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆ ವರದಿಯನ್ನು ಪ್ರಕಟಿಸಲಿದ್ದು ಅದಕ್ಕೆ ಮುನ್ನವೇ ಎಚ್ಚರಿಕೆಯ ನಡೆ ಮುಂಬಯಿ ಶೇರು ಪೇಟೆಯಲ್ಲಿ ಕಂಡು ಬಂದಿದೆ.