ಮುಂಬಯಿ : ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಮಧ್ಯಾವಧಿ ಬಜೆಟ್ ಮಂಡಿಸುವುದಕ್ಕೆ ಮುನ್ನವೇ ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡಿರುವ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿತು.
ವಿದೇಶಿ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಮುಂಚೂಣಿ ಶೇರುಗಳನ್ನು ಖರೀದಿಸಲು ಮುಂದಾದದ್ದೇ ಮುಂಬಯಿ ಶೇರು ಪೇಟೆಯ ತೇಜಿಗೆ ಕಾರಣವಾಯಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 162.39 ಅಂಕಗಳ ಏರಿಕೆಯೊಂದಿಗೆ 36,419.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 44.10 ಅಂಕಗಳ ಏರಿಕೆಯೊಂದಿಗೆ 10,875.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ವೇದಾಂತ, ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 9 ಪೈಸೆಯ ಕುಸಿತವನ್ನು ಕಂಡು 71.17 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.