ಮುಂಬಯಿ : ಮುಂಚೂಣಿ ಕಂಪೆನಿಗಳ ಎರಡನೇ ತ್ತೈಮಾಸಿಕ ಫಲಿತಾಂಶ ಉತ್ತಮ ಇದ್ದೀತೆಂಬ ವಿಶ್ವಾಸಹೊತ್ತ ಮುಂಬಯಿ ಶೇರು ಪೇಟೆ ನಿರಂತರ ಮೂರನೇ ದಿನದ ಏರುಗತಿಯನ್ನು ಕಾಯ್ದು ಕೊಂಡು ಇಂದು ಮಂಗಳವಾರದ ವಹಿವಾಟನ್ನು 297.38 ಅಂಕಗಳ ಜಿಗಿತದೊಂದಿಗೆ 35,162.48 ಅಂಕಗಳ (ಶೇ.0.85 ಏರಿಕೆ) ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 72.25 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,584.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಇನ್‌ಫೋಸಿಸ್ ಮತ್ತು ಹೀರೋ ಮೋಟೋ ಕಾರ್ಪ್ ತಮ್ಮ ತ್ತೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಇಂದು ಸ್ವಲ್ಪಮಟ್ಟಿಗೆ ಇಳಿದಿರುವುದು ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಕಂಡು ಬಂದಿರುವುದು, ದೇಶೀಯ ಹೂಡಿಕೆ ಸಂಸ್ಥೆಗಳು ಮುಂಚೂಣಿ ಶೇರುಗಳ ಭರಾಟೆಯ ಖರೀದಿ ನಡೆಸಿರುವುದು ಇವೇ ಮೊದಲಾದ ಕಾರಣಕ್ಕೆ ಶೇರು ಮಾರುಕಟ್ಟೆಯಲ್ಲಿ ಇಂದು ನಿರಂತರ ಮೂರನೇ ದಿನ ತೇಜಿ ಕಂಡು ಬರಲು ಕಾರಣವಾಯಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,804 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,778 ಶೇರುಗಳು ಮುನ್ನಡೆ ಕಂಡವು; 868 ಶೇರುಗಳು ಹಿನ್ನಡೆಗೆ ಗುರಿಯಾದವು; 158 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.