ಮುಂಬಯಿ : ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂಬ ಮತಗಟ್ಟೆ ಸಮೀಕ್ಷೆಗಳು ಮುಂಬಯಿ ಶೇರು ಪೇಟೆಯ ನಿರಂತರ ಎರಡನೇ ದಿನದ ಭರ್ಜರಿ ಜಿಗಿತಕ್ಕೆ ಕಾರಣವಾಗಿವೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 216.27 ಅಂಕಗಳ ಏರಿಕೆಯೊಂದಿಗೆ 33,462.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 81.15 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 10,333.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಇಂದು ಮೂರು ತಿಂಗಳ ಗರಿಷ್ಠ ಎತ್ತರವಾಗಿ 64.01 ರೂ. ಮಟ್ಟವನ್ನು ತಲುಪಿದುದು ಕೂಡ ಮುಂಬಯಿ ಶೇರು ಪೇಟೆಗೆ ಇನ್ನಷ್ಟು ಬಲನೀಡಿತು. ನಿರಂತರ ಎರಡನೇ ವಾರಾಂತ್ಯವನ್ನು ಸೆನ್ಸೆಕ್ಸ್ ಇಂದು ಶುಕ್ರವಾರ 212.67 ಅಂಕಗಳ ಗಳಿಕೆಯೊಂದಿಗೆ ಮುಗಿಸಿರುವುದು ಕೂಡ ಗಮನಾರ್ಹವಾಗಿದೆ.
ಇಂದಿನ ವಹಿವಾಟಿನಲ್ಲಿ ಗರಿಷ್ಠ ಖರೀದಿ ಭಾಗ್ಯವನ್ನು ಪಡೆದವುಗಳೆಂದರೆ ಮೆಟಲ್, ರಿಯಲ್ಟಿ, ಕನ್ಸೂಮರ್ ಡ್ನೂರೇಬಲ್, ಆಟೋ, ಕ್ಯಾಪಿಟಲ್ ಗೂಡ್ಸ್ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು. ಅಂತೆಯೇ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 410 ಅಂಕಗಳನ್ನೂ ನಿಪ್ಟಿ 140ಕ್ಕೂ ಅಧಿಕ ಅಂಕಗಳನ್ನು ಸಂಪಾದಿಸಿವೆ.