ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು, ನಿರಂತರ ಎರಡನೇ ದಿನದ ಮುನ್ನಡೆಯ ರೂಪದಲ್ಲಿ, ನಾಲ್ಕು ವಾರಗಳ ಗರಿಷ್ಠ ಮಟ್ಟವಾಗಿ, 192.62 ಅಂಕಗಳ ಏರಿಕೆಯೊಂದಿಗೆ 34,457.16 ಅಂಕಗಳ ಮಟ್ಟದಲ್ಲಿ ದೃಢತೆಯೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65.50 ಅಂಕಗಳ ಏರಿಕೆಯೊಂದಿಗೆ 10,682.20 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಕಳೆದ ಅಕ್ಟೋಬರ್ 17ರಂದು 34,779.58 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದ ಬಳಿಕದಲ್ಲಿ ಸೆನ್ಸೆಕ್ಸ್ ದಾಖಲಿಸಿರುವ ಎರಡನೇ ಅತಿ ದೊಡ್ಡ ಗರಿಷ್ಠ ಮಟ್ಟ ಇಂದಿನದ್ದಾಗಿದೆ. ಸೆನ್ಸೆಕ್ಸ್ ನಿನ್ನೆ ಗುರುವಾರ 119 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ತೈಲ ಬೆಲೆ ಇಳಿಕೆ, ರೂಪಾಯಿ ಚೇತರಿಕೆ ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿನ ದೃಢತೆಯೇ ಮೊದಲಾದ ಕಾರಣಗಳಿಂದಾಗಿ ಶೇರು ಮಾರುಕಟ್ಟೆಯಲ್ಲಿ ಇಂದು ಹುರುಪು ಕಂಡು ಬಂದಿತ್ತು. ರಿಲಯನ್ಸ್,ಭಾರ್ತಿ ಏರ್‌ಟೆಲ್ ಮತ್ತು ಇತರ ಕೆಲವು ಬ್ಲೂ ಚಿಪ್ ಕಂಪೆನಿಯ ಶೇರುಗಳು ಇಂದು ಉತ್ತಮ ಖರೀದಿಯನ್ನು ಕಂಡವು.
ಸಾಪ್ತಾಹಿಕ ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ನಿರಂತರ ಮೂರನೇ ವಾರದ ಗಳಿಕೆಯಾಗಿ ಅನುಕ್ರಮವಾಗಿ 298.61 ಮತ್ತು 97 ಅಂಕಗಳ ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,784 ಕಂಪೆನಿಗಳ ಶೇರುಗಳ ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,130 ಶೇರುಗಳು ಮುನ್ನಡೆ ಸಾಧಿಸಿದವು; 1,506 ಶೇರುಗಳು ಹಿನ್ನಡೆಗೆ ಗುರಿಯಾದವು; 148 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.