ಮುಂಬಯಿ : ಐಟಿ, ಇನ್‌ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಗೂಡ್ಸ್ ರಂಗ ಕಳೆದ ಮೂರು ದಿನಗಳಿಂದ ಸಂಭ್ರಮಿಸುತ್ತಿರುವ ಏರಿಕೆಯ ಆಧಾರದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 33,853.63 ಅಂಕಗಳ ಎತ್ತರವನ್ನು ತಲುಪುವುದರೊಂದಿಗೆ ದಾಖಲೆಯ ಹೊಸ ಮಟ್ಟವನ್ನು ಏರಿದ ಸಾಧನೆ ಮಾಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 33.95 ಅಂಕಗಳ ಏರಿಕೆಯನ್ನು ದಾಖಲಿಸಿ 10,485.75 ಅಂಕಗಳ ಮಟ್ಟವನ್ನು ತಲುಪಿತು. ನಿನ್ನೆ ಸೋಮವಾರ ವಹಿವಾಟಿನ ಮಧ್ಯೆ ನಿಫ್ಟಿ 10,490.45 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ಮುಟ್ಟಿತ್ತು.
ಆದರೆ ಬೆಳಗ್ಗೆ 11 ಗಂಟೆಯ ಹೊತ್ತಿನ ಚಿತ್ರಣ ಬೇರೆಯೇ ಆಗಿ ಕಂಡು ಬಂದದ್ದು ವಿಶೇಷ. ಸೆನ್ಸೆಕ್ಸ್ 89.79 ಅಂಕಗಳ ನಷ್ಟಕ್ಕೆ ಗುರಿಯಾಗಿ 33,641.40 ಅಂಕಗಳ ಮಟ್ಟಕ್ಕೆ ಕುಸಿಯಿತಾದರೆ ನಿಫ್ಟಿ 33.50 ಅಂಕಗಳ ನಷ್ಟಕ್ಕೆ ಗುರಿಯಾಗಿ 10,418.30 ಅಂಕಗಳ ಮಟ್ಟಕ್ಕೆ ಜಾರಿತು.
ಇಂದು ಅತ್ಯಂತ ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಎಸ್ ಬ್ಯಾಂಕ್, ಎಸ್‌ಬಿಐ, ಟಾಟಾ ಮೋಟರ್, ರಿಲಯನ್ಸ್, ಒಎನ್‌ಜಿಸಿ.
ಇಂದಿನ ಬೆಳಗ್ಗಿನ ಟಾಪ್‌ಗೆನರ್‌ಗಳು : ಎಚ್‌ಸಿಎಲ್ ಟೆಕ್, ಟಿಸಿಎಸ್, ಇನ್‌ಫೋಸಿಸ್, ಝೀ ಎಂಟರ್‌ಟೇನ್‌ಮೆಂಟ್, ವಿಪ್ರೋ.
ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಬಿಸಿಸಿಎಲ್, ಎಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ರಿಲಯನ್ಸ್.