ಮುಂಬಯಿ : ಜೂನ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ತಿಂಗಳ ಕೊನೇ ಗುರುವಾರಕ್ಕೆ ಇನ್ನು ಎರಡೇ ದಿನಗಳು ಬಾಕಿ ಇರುವಂತೆಯೇ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ, ವಹಿವಾಟಿನ ನಡುವೆ 145 ಅಂಕಗಳ ಏರಿಕೆಯನ್ನು ದಾಖಲಿಸಿದ ಹೊರತಾಗಿಯೂ, ದಿನಾಂತ್ಯಕ್ಕೆ ಕೇವಲ 19.69 ಅಂಕಗಳ ಏರಿಕೆಯನ್ನು ಉಳಿಸಿಕೊಂಡು ನಿರಾಶೆ ಉಂಟು ಮಾಡಿತು.
ದಿನದ ವಹಿವಾಟನ್ನು ಸೆನ್ಸೆಕ್ಸ್ 19.69 ಅಂಕಗಳ ಅಲ್ಪ ಏರಿಕೆಯೊಂದಿಗೆ 35,490.04 ಅಂಕಗಳ ಮಟ್ಟದಲ್ಲಿ ಮುಗಿಸಿದರೆ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೇವಲ 6.70 ಅಂಕಗಳ ಏರಿಕೆಯನ್ನು ಉಳಿಸಿಕೊಂಡು 10,769.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಐರೋಪ್ಯ ಒಕ್ಕೂಟ, ಚೀನ ಮತ್ತು ಭಾರತದೊಂದಿಗೆ ಅಮೆರಿಕದ ವಾಣಿಜ್ಯ ಬಿಕ್ಕಟ್ಟು ಮುಂದುವರಿದಿರುವ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ತೋರಿಬಂದಿದೆ.
ವಿದೇಶಿ ಹೂಡಿಕೆದಾರ ಸಂಸ್ಥೆಗಳು ನಿನ್ನೆ ಸೋಮವಾರ 198.8 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು. ದೇಶೀಯ ಹೂಡಿಕೆದಾರ ಸಂಸ್ಥೆಗಳು 86.22 ಕೋಟಿ ರೂ. ಶೇರುಗಳನ್ನು ಮಾರಿದ್ದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,763 ಕಂಪೆನಿಗಳ ಶೇರುಗಳು ವಹಿವಟಿಗೆ ಒಳಪಟ್ಟವು; 849 ಶೇರುಗಳು ಮುನ್ನಡೆ ಕಂಡವು; 1,779 ಶೇರುಗಳು ಹಿನ್ನಡೆಗೆ ಗುರಿಯಾದವು; 135 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.