ಮುಂಬಯಿ : ನಿರಂತರ ಆರನೇ ದಿನವೂ ಏರು ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 55 ಅಂಕಗಳ ಮುನ್ನಡೆಯೊಂದಿಗೆ 32,241.93 ಅಂಕಗಳ ಮಟ್ಟದಲ್ಲಿ, ಒಂದು ತಿಂಗಳ ಗರಿಷ್ಠ ಮಟ್ಟದಲ್ಲಿ, ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ತೇಜಿಗೆ ಕಾರಣವಾದ ರಂಗಗಳೆಂದರೆ ಫಾರ್ಮಾ, ಬ್ಯಾಂಕಿಂಗ್, ಐಟಿ, ಇತ್ಯಾದಿ. ಹಾಗಿದ್ದರೂ ಹೂಡಿಕೆದಾರರು ಮತ್ತು ವಹಿವಾಟುದಾರರು ಚೀನದ ದುರ್ಬಲ ಆರ್ಥಿಕ ಅಂಕಿ ಅಂಶ ಮತ್ತು ಏರಿದ ದೇಶೀಯ ಹಣದುಬ್ಬರ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆ ಅನುಸರಿಸಿರುವುದು ಇಂದಿನ ವಹಿವಾಟಿನಲ್ಲಿ ಸ್ಪಷ್ಟವಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 7.30 ಅಂಕಗಳ ಮುನ್ನಡೆಯೊಂದಿಗೆ 10,086.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸೆನ್ಸೆಕ್ಸ್ ಕಳೆದ ಐದು ದಿನಗಳ ವಹಿವಾಟಿನಲ್ಲಿ 524.44 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,303 ಶೇರುಗಳು ಮುನ್ನಡೆ ಸಾಧಿಸಿದರೆ 1,308 ಶೇರುಗಳು ಹಿನ್ನಡೆ ಅನುಭವಿಸಿದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಎಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಅದಾನಿ ಪೋರ್ಟ್ ಮತ್ತು ಟಾಟಾ ಮೋಟರ್ ಡಿವಿಆರ್ ಟಾಪ್ ಗೇನರ್ ಎನಿಸಿಕೊಂಡವು; ವಿಪ್ರೋ, ಕೋಟಕ್ ಮಹೀಂದ್ರ ಬ್ಯಾಂಕ್, ವೇದಾಂತ ಟಾಪ್ ಲೂಸರ್ ಎನಿಸಿಕೊಂಡವು.