ಮುಂಬಯಿ : ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಮತ್ತು ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ 175 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,299.47 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47 ಅಂಕಗಳ ಕುಸಿತವನ್ನು ಕಂಡು ದಿನದ ವಹಿವಾಟನ್ನು 10,301.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಒಟ್ಟು 2,766 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; 1,024 ಶೇರುಗಳು ಮುನ್ನಡೆ ಸಾಧಿಸಿದವು; 1,591 ಶೇರುಗಳು ಹಿನ್ನಡೆಗೆ ಗುರಿಯಾದವು; 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ ಶೇರು ಶೇ.13.40 ಕುಸಿತವನ್ನು ಕಂಡಿತು; ಹಾಗಾಗಿ 52 ವಾರಗಳ ಕನಿಷ್ಠ ಮಟ್ಟವಾಗಿ 184.25 ರೂ. ತಲುಪಿತು.
ಉಳಿದಂತೆ ಏಶ್ಯನ್ ಪೇಂಟ್, ಮಾರುತಿಸುಜುಕಿ, ಎಚ್ ಯು ಎಲ್, ಭಾರ್ತಿ ಏರ್ ಟೆಲ್, ಬಜಾಜ್ ಆಟೋ, ಐಟಿಸಿ, ಆರ್‌ಐಎಲ್, ಐಸಿಐಸಿಐ ಬ್ಯಾಂಕ್, ಮಹೀಂದ್ರ, ಎಸ್‌ಬಿಐ, ಎನ್‌ಟಿಪಿಸಿ, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಶೇರುಗಳು ಗಮನಾರ್ಹ ನಷ್ಟಕ್ಕೆ ಗುರಿಯಾದವು.