ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 122 ಅಂಕಗಳ ಏರಿಕೆಯನು ದಾಖಲಿಸಿಯೂ ಅನಂತರದಲ್ಲಿ ಕುಸಿತಕ್ಕೆ ಗುರಿಯಾಗಿ ಬೆಳಗ್ಗೆ 11 ಗಂಟೆಯ ಸುಮಾರಿಗೆ 202.11 ಅಂಕಗಳ ನಷ್ಟದೊಂದಿಗೆ 35,221.37 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 68.30 ಅಂಕಗಳ ನಷ್ಟಕ್ಕೆ ಗುರಿಯಾಗಿ 10,646.00 ಅಂಕಗಳ ಮಟ್ಟಕ್ಕೆ ಇಳಿಯಿತು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿನ ಮಿಶ್ರ ಪ್ರತಿಕ್ರಿಯೆಯ ಪರಿಣಾಮವಾಗಿ ಸೆನ್ಸೆಕ್ಸ್ ಇಂದು ಬೆಳಗ್ಗೆ ತಾಸು ವಹಿವಾಟಿನ ಬಳಿಕ ನಷ್ಟದ ಹಾದಿಯನ್ನು ಹಿಡಿಯಿತು.
ಡಾಲರ್ ಎದುರು ರೂಪಾಯಿ ಇಂದು ಹದಿಮೂರು ಪೈಸೆಯಷ್ಟು ಸುಧಾರಿಸಿ 68.33 ರೂ.ಗಳಿಗೆ ಏರಿರುವುದು ಸ್ವಲ್ಪ ಮಟ್ಟಿನ ಸಮಾಧಾನದ ವಿಷಯವಾಯಿತು. ಕಳೆದ ಶುಕ್ರವಾರ ರೂಪಾಯಿ ಡಾಲರ್ ಎದರು 33 ಪೈಸೆಯಷ್ಟು ಚೇತರಿಕೆ ಕಂಡು 68.46 ರೂ. ಗೆ ಏರಿತ್ತು.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್, ಟಾಟಾ ಸ್ಟೀಲ್, ಟಾಟಾ ಮೋಟರ್, ಎಸ್‌ಬಿಐ, ಬಜಾಜ್ ಆಟೋ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗಿನ ಟಾಪ್ ಗೇನರ್‌ಗಳು : ಬಜಾಜ್ ಆಟೋ, ಏಶ್ಯನ್ ಪೇಂಟ್ಸ್, ಭಾರ್ತಿ ಇನ್‌ಫ್ರಾಟೆಲ್, ಇಂಡಸ್ ಇಂಡ್ ಬ್ಯಾಂಕ್, ಇನ್‌ಪೋಸಿಸ್; ಟಾಪ್ ಲೂಸರ್‌ಗಳು : ಎನ್‌ಟಿಪಿಸಿ, ಐಡಿಯಾ ಸೆಲ್ಯುಲರ್, ಒಎನ್‌ಜಿಸಿ, ಹಿಂಡಾಲ್ಕೊ, ವೇದಾಂತ.