ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಶುಕ್ರವಾರ 155.14 ಅಂಕಗಳ ಕುಸಿತಕ್ಕೆ ಗುರಿಯಾಗಿ 38,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿ ದಿನದ ವಹಿವಾಟನ್ನು 37,869.23 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಹಿವಾಟುದಾರರಿಂದ ನಡೆದ ಲಾಭನಗದೀಕರಣದ ಶೇರು ಮಾರಾಟ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ನಿಸ್ತೇಜ ವಾತಾವರಣ, ಮುಂಬಯಿ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾದವು.
ಜೂನ್ ತ್ತೈಮಾಸಿಕದಲ್ಲಿ 4,876 ಕೋಟಿ ರೂ.ಗಳ ಭಾರೀ ನಷ್ಟಕ್ಕೆ ಗುರಿಯಾದ ಎಸ್‌ಬಿಐ ನ ಶೇರುಗಳು ಇಂದು ಶೇ.3.79ರಷ್ಟು ಕುಸಿದದ್ದು ಗಮನಾರ್ಹವೆನಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 41.20 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,429.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಾಗಿದ್ದರೂ ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ನಿರಂತರ ಮೂರನೇ ವಾರವನ್ನು ಗಳಿಕೆಯೊಂದಿಗೆ ಕೊನೆಗೊಳಿಸಿವೆ. ಹಿಂದಿನ ವಾರಾಂತ್ಯಕ್ಕೆ ಹೋಲಿಸಿದರೆ ಸೆನ್ಸೆಕ್ಸ್ 313.07 ಅಂಕ (ಶೇ.0.83) ಮತ್ತು ನಿಫ್ಟಿ 68.70 ಅಂಕ (ಶೇ.1.01) ಅಂಕಗಳನ್ನು ಸಂಪಾದಿಸಿವೆ.
ಇಂದಿನ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 2,857 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,051 ಶೇರುಗಳು ಮುನ್ನಡೆ ಕಂಡವು; 1,677 ಶೇರುಗಳು ಹಿನ್ನಡೆಗೆ ಗುರಿಯಾದವು; 129 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.