ಮುಂಬಯಿ : ನಿರಂತರ ಐದನೇ ದಿನವೂ ಕುಸಿತದ ಹಾದಿಯಲ್ಲಿ ಸಾಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ವಹಿವಾಟನ್ನು 252.88 ಅಂಕಗಳ ನಷ್ಟದೊಂದಿಗೆ 32,923.12 ಅಂಕಗಳ ಮಟ್ಟಕ್ಕೆ ಕುಸಿತದೊಂದಿಗೆ ಮುಕ್ತಾಯಗೊಳಿಸಿತು.
ಕಳೆದ ನಾಲ್ಕು ದಿನಗಳ ಸೋಲಿನಲ್ಲಿ ಸೆನ್ಸೆಕ್ಸ್ ಒಟ್ಟು 741.94 ಅಂಕಗಳ ನಷ್ಟವನ್ನು ಅನುಭವಿಸಿದೆ.
ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 100.90 ಅಂಕಗಳ ನಷ್ಟದೊಂದಿಗೆ 10,094.25 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ವಿದೇಶಿ ಹೂಡಿಕೆದಾರರು ನಿರಂತರವಾಗಿ ತಮ್ಮ ಬಂಡವಾಳವನ್ನು ಹಿಂದೆಗೆದುಕೊಳ್ಳುತ್ತಿರುವುದೇ ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಕಾರಣವಾಗಿದೆ.
ದೇಶದ ಚಾಲ್ತಿ ಖಾತೆ ಕೊರತೆ ಡಿಸೆಂಬರ್ ತ್ತೈಮಾಸಿಕ ಅಂತ್ಯದಲ್ಲಿ ಶೇ.2ರಷ್ಟು ಕುಸಿದಿರುವ ಬಗ್ಗೆ ಆರ್‌ಬಿಐ ಕಳೆದ ಶನಿವಾರ ಬಹಿರಂಗಪಡಿಸಿರುವುದು ಶೇರು ಮಾರುಕಟ್ಟೆಯ ಕುಸಿತಕ್ಕೆ ಪರೋಕ್ಷ ಕಾರಣವೆನಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ವಹಿವಾಟಿನ ನಡುವೆ 19 ಪೈಸೆಯಷ್ಟೆ ಕುಸಿದಿರುವುದು ಆತಂಕಕ್ಕೆ ಕಾರಣವಾಯಿತು.
ಇಂದು 2,911 ಕಂಪೆನಿಗಳ ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 555 ಕಂಪೆನಿಗಳು ಮಾತ್ರವೇ ಮುನ್ನಡೆ ಸಾಧಿಸಿದವು 2,190 ಕಂಪೆನಿಗಳ ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.