ಮುಂಬಯಿ : ರಾಜಕೀಯ ಸ್ಥಿತಿಗತಿ ಮತ್ತು ಸ್ಥೂಲ ಆರ್ಥಿಕಾಭಿವೃದ್ಧಿ ಕುರಿತ ಕಳವಳದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಐದನೇ ದಿನದ ಕುಸಿತಕ್ಕೆ ಒಳಗಾಗಿ ಇಂದು ಸೋಮವಾರದ ವಹಿವಾಟಿನಲ್ಲಿ 232 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಕಂಡ ಸೋಲಿನ ಕರಾಳ ಛಾಯೆ ಮುಂದಿನ ವರ್ಷದ ಲೋಕಸಭಾ ಚುನಾವಣೆಗಳ ಮೇಲೆ ಆದೀತೆಂಬ ಕಳವಳ ಮುಂಬಯಿ ಶೇರು ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಈ ನಡುವೆ ಇಂದು ಪ್ರಖ್ಯಾತ ಮೂಡಿ ರೇಟಿಂಗ್ ಸಂಸ್ಥೆಯ ಇನ್‌ವೆಸ್ಟರ್ ಸರ್ವಿಸ್ ಪಿಎನ್‌ಬಿ ರೇಟಿಂಗ್ ಅನ್ನು ಕೆಳಮಟ್ಟಕ್ಕೆ ಇಳಿಸಿದುದು ಶೇರು ಮಾರುಕಟ್ಟೆಗೆ ಅಪಥ್ಯ ಎನಿಸಿತು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 126 ಅಂಕಗಳ ಜಿಗಿತ ಕಂಡಿದ್ದ ಮುಂಬಯಿ ಶೇರು ಪೇಟೆ ದಿನಾಂತ್ಯಕ್ಕೆ 232.17 ಅಂಕಗಳ ನಷ್ಟಕ್ಕೆ ಗುರಿಯಾಗಿ 34,616.13 ಅಂಕಗಳ ಮಟ್ಟಕ್ಕೆ ಕುಸಿಯಿತು. ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ ಅನುಭವಿಸಿರುವ ನಷ್ಟ 708.41 ಅಂಕಗಳು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 79.70 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,516.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು.
ಡಾಲರ್ ಎದುರಿನ ರೂಪಾಯಿಯ ನಿರಂತರ ಕುಸಿತದಿಂದ ವಿದೇಶಿ ಬಂಡವಾಳದ ಹೊರ ಹರಿಯುವ ಹೆಚ್ಚಿರುವುದು ಕೂಡ ಶೇರು ಪೇಟೆಗೆ ಚಿಂತೆಯ ವಿಷಯವಾಯಿತು.