ಮುಂಬಯಿ : ನಿನ್ನೆ ಬುಧವಾರ ಪ್ರಕಟಗೊಂಡ ಆರ್ ಬಿ ಐ ಹಣಕಾಸು ನೀತಿಯನ್ನು ಅನುಸರಿಸಿ ಆರಂಭಗೊಂಡಿರುವ ರಾಲಿಯನ್ನು ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರ ಕೂಡ ಮುಂದುವರಿಸಿದೆ. ಅಂತೆಯೇ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 208 ಅಂಕಗಳ ಜಿಗಿತವನ್ನು ಸಾಧಿಸಿದೆ. ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 276 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಹಣದುಬ್ಬರವನ್ನು ಹದ್ದು ಬಸ್ತಿನಲ್ಲಿಡಲು ಆರ್ ಬಿ ಐ ನಿನ್ನೆ ಬುಧವಾರ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಶೇ.0.25ರಷ್ಟು ಏರಿಸಿ ಅವುಗಳನ್ನು ಅನುಕ್ರಮವಾಗಿ ಶೇ.6.25 ಮತ್ತು ಶೇ.6.00ಕ್ಕೆ ನಿಗದಿಸಿತ್ತು.
ಇಂದು ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಮುನ್ನಡೆಯನ್ನು 320.98 ಅಂಕಗಳ ಎತ್ತರಕ್ಕೆ ಏರಿಸುವುದರೊಂದಿಗೆ 35,499.86 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 93.80 ಅಂಕಗಳ ಜಿಗಿತದೊಂದಿಗೆ 10,778.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವೇದಾಂತ,ರಿಲಯನ್ಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಟಿಸಿಎಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಐಡಿಯಾ ಸೆಲ್ಯುಲರ್, ಎಕ್ಸಿಸ್ ಬ್ಯಾಂಕ್, ವೇದಾಂತ, ಅದಾನಿ ಪೋರ್ಟ್, ಹಿಂಡಾಲ್ಕೊ ಮತ್ತು ಟಾಪ್ ಲೂಸರ್‌ಗಳಾಗಿ ಪವರ್ ಗ್ರಿಡ್ ಕಾರ್ಪೊರೇಶನ್, ಕೋಲ್ ಇಂಡಿಯಾ, ಟೈಟಾನ್ ಕಂಪೆನಿ, ಟೆಕ್ ಮಹೀಂದ್ರ, ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಕಂಡು ಬಂದವು.
ಹಾಗಿದ್ದರೂ ಡಾಲರ್ ಎದುರು ರೂಪಾಯಿ ಇಂದು 17 ಪೈಸೆಯಷ್ಟು ಕುಸಿದು 67.09 ರೂ. ಮಟ್ಟಕ್ಕೆ ಇಳಿಯಿತು.