ಮುಂಬಯಿ : ಶೇಕಡಾ 97ರಷ್ಟು ಮಳೆ ತರುವ ಈ ಬಾರಿಯ ಮುಂಗಾರು ಕೊರತೆ ರಹಿತವಾಗಿ ಮಾಮೂಲಿಯದ್ದಾಗಿರುತ್ತದೆ ಎಂದು ಹವಾಮಾನ ಇಲಾಖೆ ನುಡಿದಿರುವ ಭವಿಷ್ಯದಿಂದ ಮುಂಬಯಿ ಶೇರು ಪೇಟೆಯ ಗರಿಗೆದರಿರುವ ಕಾರಣ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 100 ಅಂಕಗಳ ಜಿಗಿತವನ್ನು ಸಾಧಿಸಿತು.
ಕಳೆದ ಎಂಟು ದಿನಗಳಿಂದ ನಿರಂತರ ಏರುಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಒಟ್ಟಾರೆಯಾಗಿ 1,286.36 ಅಂಕಗಳನ್ನು ಸಂಪಾದಿಸಿತ್ತು.
ಇಂದು ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 53.48 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,358.91 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.40 ಅಂಕಗಳ ಏರಿಕೆಯೊಂದಿಗೆ 10,540.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಮಹಿಂದ್ರ ಆ್ಯಂಡ್ ಮಹೀಂದ್ರ, ಟಾಟಾ ಸ್ಟೀಲ್, ಹಿಂಡಾಲ್ಕೊ, ಇನ್‌ಫೋಸಿಸ್, ಎಚ್‌ಡಿಎಫ್ಸಿ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಪವರ್ ಗ್ರಿಡ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಐಡಿಯಾ ಸೆಲ್ಯುಲರ್ ಮತ್ತು ಮಹೀಂದ್ರ ಶೇರುಗಳು ಮುನ್ನಡೆ ಕಂಡವು.
ಟಾಪ್ ಲೂಸರ್‌ಗಳಾಗಿ ಇನ್‌ಫೋಸಿಸ್, ಭಾರ್ತಿ ಇನ್‌ಫ್ರಾಟೆಲ, ಸನ್ ಫಾರ್ಮಾ, ಎಕ್ಸಿಸ್ ಬ್ಯಾಂಕ್, ವಿಪ್ರೋ ಶೇರುಗಳು ಹಿನ್ನಡೆಗೆ ಗುರಿಯಾದವು.