ಮುಂಬಯಿ : ಜಾಗತಿಕ ಸ್ಥಿರತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಮೂರನೇ ದಿನವಾದ ಇಂದು ಸೋಮವಾರ 162 ಅಂಕಗಳ ಏರಿಕೆಯನ್ನು ಸಾಧಿಸಿದೆ. ಐಟಿ ದಿಗ್ಗಜ ಇನ್‌ಫೋಸಿಸ್ ನೊಂದಿಗೆ ಈ ವಾರಾಂತ್ಯ ಪ್ರಕಟನೆ ಆರಂಭಗೊಳ್ಳುವ ಕಂಪೆನಿಗಳ ನಾಲ್ಕನೇ ತ್ತೈಮಾಸಿಕ ಹಾಗೂ ವಾರ್ಷಿಕ ಲೆಕ್ಕಪತ್ರ ಫಲಿತಾಂಶಗಳು ಆಶಾದಾಯಕವಾಗಿರುವುವೆಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಈಗಲೇ ಗರಿಗೆದರಿದೆ.
ಇಂದು ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್ 161.57 ಅಂಕಗಳ ಏರಿಕೆಯೊಂದಿಗೆ 33,788.54 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.75 ಅಂಕಗಳ ಏರಿಕೆಯೊಂದಿಗೆ 10,397.70 ಅಂಕಗಳ ಮಟ್ಟದಲ್ಲೂ ಆಶಾದಾಯಕವಾಗಿ ಮುಗಿಸಿದವು.
ಕಳೆದ ಶುಕ್ರವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 1,305.45 ಕೋಟಿ ರೂ. ಮೌಲ್ಯದ ಶೇರು ಖರೀದಿಸಿದ್ದವು ವಿದೇಶೀಯ ಹೂಡಿಕೆದಾರರು 524.85 ಕೋಟಿ ರೂ. ಶೇರುಗಳನ್ನು ಮಾರಿದ್ದರು.
ಸೆನ್ಸೆಕ್ಸ್ ಕಳೆದ ವಾರಾಂತ್ಯದ ನಿರಂತರ ಎರಡು ದಿನಗಳ ವಹಿವಾಟಿನಲ್ಲಿ 607.90 ಅಂಕಗಳ ಮುನ್ನಡೆಯನ್ನು ಸಂಪಾದಿಸಿದ್ದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,906 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; 1,654 ಶೇರುಗಳು ಮುನ್ನಡೆ ಸಾಧಿಸಿದವು; 1,069 ಶೇರಗಳು ಹಿನ್ನಡೆ ಕಂಡವು; 183 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.