ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನವಾಗಿ ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 181 ಅಂಕಗಳ ಜಿಗಿತವನ್ನು ಸಾಧಿಸಿದೆ.
ಏಶ್ಯನ್ ಶೇರು ಪೇಟೆಗಳಲ್ಲಿ ಧನಾತ್ಮಕ ಸನ್ನಿವೇಶ ನೆಲೆ ಗೊಂಡಿರುವುದು, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಭರಾಟೆಯ ಶೇರು ಖರೀದಿಗೆ ಮುಂದಾಗಿರುವುದು, ಅಮೆರಿಕದ ವಾಲ್ ಸ್ಟ್ರೀಟ್ ಶೇರು ಪೇಟೆ ನಿನ್ನೆಯ ವಹಿವಾಟಿನಲ್ಲಿ ಉತ್ತಮ ಮುನ್ನಡೆ ಸಾಧಿಸಿರುವುದು ಮುಂತಾಗಿ ಹಲವಾರು ಕಾರಣಗಳು ಮುಂಬಯಿ ಶೇರು ಪೇಟೆಯಲ್ಲಿನ ತೇಜಿಗೆ ಕಾರಣವಾಗಿವೆ.
ನಿನ್ನೆ ಸೋಮವಾರದ ವಹಿವಾಟಿನಲ್ಲಿ 292.76 ಅಂಕಗಳ ಏರಿಕೆ ಸಾಧಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11.15ರ ಹೊತ್ತಿಗೆ 87.31 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,295.45 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.80 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 10,736.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಸ್ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಸಕ್ರಿವಾಗಿದ್ದವು.
ಈ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ತಮ್ಮ ಮೂರೂವರೆ ವರ್ಷಗಳ ಗರಿಷ್ಠ ಮಟ್ಟದಿಂದ ಹಿಂದಕ್ಕೆ ಸರಿಯಲು ಆರಂಭಿಸಿರುವುದು ಶೇರು ಪೇಟೆಗಳಿಗೆ ಕೊಂಚ ನೆಮ್ಮದಿಯನ್ನು ತಂದಿದೆ.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಬ್ಯಾಂಕ್, ಹೆಲ್ತ್‌ಕೇರ್, ಕನ್ಸೂಮರ್ ಡ್ನೂರೇಬಲ್, ಪವರ್, ಎಫ್ಎಂಸಿಜಿ, ಕ್ಯಾಪಿಟಲ್ ಗೂಡ್ಸ್ ಮತ್ತು ಪಿಎಸ್‌ಯು ಶೇರುಗಳು ಶೇ.0.88 ರಷ್ಟು ಏರಿದವು.