ಮುಂಬಯಿ : ಆರ್‌ಬಿಐ ತನ್ನ ರಿಪೋ ಬಡ್ಡಿ ದರವನ್ನು ಶೇ.6ರಲ್ಲೇ ಉಳಿಸಿಕೊಂಡು ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 174.33 ಅಂಕಗಳ ಏರಿಕೆಯೊಂದಿಗೆ 31,671.71 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65.95 ಅಂಕಗಳ ಜಿಗಿತವನ್ನು ದಾಖಲಿಸಿದ ದಿನದ ವಹಿವಾಟನ್ನು 9,925.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,474 ಶೇರುಗಳು ಮುನ್ನಡೆ ಸಾಧಿಸಿದವು; 1,157 ಶೇರುಗಳು ಹಿನ್ನಡೆಗೆ ಗುರಿಯಾದವು; 126 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ ಮತ್ತು ಟಾಟಾ ಮೋಟರ್ ಡಿವಿಆರ್ ಶೇರುಗಳು ಇಂದು ಟಾಪ್ ಗೇನರ್ ಎನಿಸಕೊಂಡವು. ಭಾರ್ತಿ ಏರ್‌ಟೆಲ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಸಾಲ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ಸರಕಾರದ ಒತ್ತಡಕ್ಕೆ ಮಣಿಯದ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ಪ್ರಕಟಿಸಿರುವ 2017-18ರ ಹಾಲಿ ಹಣಕಾಸು ಸಾಲಿನ ನಾಲ್ಕನೇ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರಿಪೋ ದರವನ್ನು (ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು) ಶೇ.6ರ ಪ್ರಮಾಣದಲ್ಲೇ ಉಳಿಸಿಕೊಂಡಿರುವುದು ಶೇರು ವಿಶ್ಲೇಷಕರ ದೃಷ್ಟಿಯಲ್ಲಿ ದೂರದೃಷ್ಟಿಯ ಕ್ರಮ ಎನಿಸಿಕೊಂಡಿತು.
ಕಳೆದ ಜೂನ್ ತ್ತೈಮಾಸಿಕದಲ್ಲಿ , ಮೂರು ವರ್ಷಗಳ ಕನಿಷ್ಠ ಮಟ್ಟವಾಗಿ ಶೇ. 5.7ಕ್ಕೆ ಕುಸಿದಿರುವ ದೇಶದ ಜಿಡಿಪಿಗೆ ಉತ್ತೇಜನ ನೀಡುವ ಸಲುವಾಗಿ ಬಡ್ಡಿ ದರಗಳನ್ನು ಕಡಿತ ಮಾಡಬೇಕೆಂದು ಸರಕಾರ ಆರ್‌ಬಿಐ ಮೇಲೆ ಅಗಾಧ ಒತ್ತಡವನ್ನು ಹೇರಿತ್ತು.
ಆದರೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸರಕಾರದ ಈ ಒತ್ತಡಕ್ಕೆ ಮಣಿಯದೆ ಬ್ಯಾಂಕಿಂಗ್ ವ್ಯವಸ್ಥೆಗೆ ನಗದು ಪೂರೈಕೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವ ರಿಪೋ ಬಡ್ಡಿ ದರವನ್ನು ಈಗಿನ ಶೇ.6ರ ಪ್ರಮಾಣದಲ್ಲೇ ಉಳಿಸಿಕೊಳ್ಳುವ ಛಾತಿಯನ್ನು ತೋರಿರುವುದು ಗಮನಾರ್ಹ ಎನಿಸಿತು.