ಮುಂಬಯಿ : ದಿನಪೂರ್ತಿ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 16.06 ಅಂಕಗಳ ಏರಿಕೆಯೊಂದಿಗೆ 35,176.42 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.30 ಅಂಕಗಳ ನಷ್ಟವನ್ನು ದಾಖಲಿಸಿ ದಿನದ ವಹಿವಾಟನ್ನು 10,718.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಮೂರು ದಿನಗಳ ನಿರಂತರ ಲಾಭಕರ ಹಾದಿಯಲ್ಲಿ ಸಾಗಿ ಬಂದಿರುವ ಸೆನ್ಸೆಕ್ಸ್ ಒಟ್ಟು 659.09 ಅಂಕಗಳನ್ನು ಸಂಪಾದಿಸಿತ್ತು.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಉತ್ತಮ ತೇಜಿ ತೋರಿಬಂದಿತ್ತಾದರೂ ಬಳಿಕ ಲಾಭನಗದೀಕರಣದ ಪ್ರವೃತ್ತಿ ತೋರಿ ಬಂದು ಸೆನ್ಸೆಕ್ಸ್ ಜಾರು ಹಾದಿಗೆ ಹೊರಳಿಕೊಂಡಿತು.
ಇಂದು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರ ನೀತಿಯನ್ನು ಪ್ರಕಟಿಸಲಿದ್ದು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಎಚ್ಚರಿಕೆಯ ನಡೆ ತೋರಿ ಬಂದಿತು. ಹಾಗಿದ್ದರೂ ಮುಂಬಯಿ ಶೇರು ಪೇಟೆ ನಿರಂತರ ನಾಲ್ಕನೇ ದಿನದ ಮುನ್ನಡೆಯನ್ನು ಉಳಿಸಿಕೊಂಡಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,819 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 919 ಶೇರುಗಳು ಮುನ್ನಡೆ ಕಂಡವು; 1,779 ಶೇರುಗಳು ಹಿನ್ನಡೆಗೆ ಗುರಿಯಾದವು; 121 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.