ಮುಂಬಯಿ : ನಿರಂತರ ಮೂರು ದಿನಗಳ ಕಾಲ ಏರುಗತಿಯನ್ನು ಕಾಯ್ದುಕೊಂಡು ಮುನ್ನುಗ್ಗಿ ಬಂದ ಮುಂಬಯಿ ಶೇರು ಪೇಟೆಯ ಓಟಕ್ಕೆ ಇಂದು ನಾಲ್ಕನೇ ದಿನ ಬ್ರೇಕ್ ಬಿದ್ದಿದೆ. ಇಂದು ಗುರುವಾರದ ವಹಿವಾಟನ್ನು ಸೆನ್ಸೆಕ್ಸ್ 73.08 ಅಂಕಗಳ ನಷ್ಟದೊಂದಿಗೆ 35,203.85 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಒಟ್ಟು 403.97 ಅಂಕಗಳನ್ನು ಸಂಪಾದಿಸಿದ್ದ ಸೆನ್ಸೆಕ್ಸ್ ಇಂದು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಗ್ಗರಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 25.15 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,716.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಬುಧವಾರ ವಿದೇಶಿ ಹೂಡಿಕೆದಾರರು 704.03 ಕೋಟಿ ರೂ. ಶೇರುಗಳನ್ನು ಮಾರಿದ್ದರು; ದೇಶೀಯ ಸಾಂಸ್ಥಿಕ ಹೂಡಿಕೆದಾರರು 664.92 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,787 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 775 ಶೇರುಗಳು ಮುನ್ನಡೆದವು; 1,890 ಶೇರುಗಳು ಹಿನ್ನಡೆಗೆ ಗುರಿಯಾದವು; 122 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.