ಮುಂಬಯಿ : ನಿನ್ನೆ ಗುರುವಾರ ವಿತ್ತ ಸಚಿವ ಅರುಣ್ ಜೇತ್ಲಿ ಮಂಡಿಸಿದ್ದ ಕೇಂದ್ರ ಬಜೆಟ್‌ನಿಂದ ನಿರಾಶೆಗೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 324 ಅಂಕಗಳ ನಷ್ಟಕ್ಕೆ ಗುರಿಯಾಗಿ ಹೂಡಿಕೆದಾರರಲ್ಲಿ ಕಳವಳ ಮೂಡಿಸಿತು.
ಬ್ಯಾಂಕಿಂಗ್, ಆಟೋ, ಹಣಕಾಸು ಮತ್ತು ಟೆಲಿಕಾಂ ರಂಗದ ಶೇರುಗಳು ತೀವ್ರ ಮಾರಾಟ ಒತ್ತಡವನ್ನು ಕಂಡವು.
ಬಜೆಟ್‌ನಲ್ಲಿ ದೀರ್ಘಾವಧಿ ಶೇರುಗಳ ಲಾಭದ ಮೇಲೆ ಶೇ.10ರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಹೇರಲಾಗಿರುವುದು ಶೇರು ಮಾರುಕಟ್ಟೆಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 328.24 ಅಂಕಗಳ ನಷ್ಟದೊಂದಿಗೆ 35,578.42 ಅಂಕಗಳ ಮಟ್ಟಕ್ಕೆ ಇಳಿಯಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 96.35 ಅಂಕಗಳ ನಷ್ಟದೊಂದಿಗೆ 10,920.55 ಅಂಕಗಳ ಮಟ್ಟಕ್ಕೆ ಕುಸಿಯಿತು.
ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳ ಪೈಕಿ ಕೋಟಕ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಶೇ.2.9ರ ಕುಸಿತಕ್ಕೆ ಗುರಿಯಾದವು.