ಮುಂಬಯಿ : ನಿರಂತರ ಐದನೇ ದಿನವಾಗಿ ಇಂದು ಬುಧವಾರ ಸೋಲು ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದಿನ ವಹಿವಾಟನ್ನು 119.51 ಅಂಕಗಳ ನಷ್ಟದೊಂದಿಗೆ 36,034.11 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳಲ್ಲಿ 720ಕ್ಕೂ ಅಧಿಕ ಅಂಕಗಳ ನಷ್ಟವನ್ನು ಕಂಡಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,793.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹೂಡಿಕೆದಾರರು ಬ್ಯಾಂಕಿಂಗ್, ಆಟೋ, ಮೆಟಲ್ ಮತ್ತು ಫಾರ್ಮಾ ಶೇರುಗಳ ವ್ಯಾಪಕ ಮಾರಾಟಕ್ಕೆ ಕೊನೇ ತಾಸಲ್ಲಿ ಮುಂದಾದದ್ದೇ ಸೆನ್ಸೆಕ್ಸ್ ನಷ್ಟಕ್ಕೆ ಕಾರಣವಾಯಿತು. ದೇಶೀಯ ಮತ್ತು ವಿದೇಶೀ ಹೂಡಿಕೆದಾರರು ಎಗ್ಗಿಲ್ಲದ ಮಾರಾಟದಲ್ಲಿ ತೊಡಗಿಕೊಂಡದ್ದು ಕೂಡ ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾಯಿತು.
ಇಂದಿನ ಟಾಪ್ ಲೂಸರ್‌ಗಳೆನಿಸಿಕೊಂಡ ಒಎನ್‌ಜಿಸಿ, ಎಸ್‌ಬಿಐ, ಪವರ್ ಗ್ರಿಡ್, ಲಾರ್ಸನ್, ಎಸ್ ಬ್ಯಾಂಕ್, ಏಶ್ಯನ್ ಪೇಂಟ್, ಬಜಾಜ್ ಫಿನಾನ್ಸ್, ಮಾರುತಿ, ಎನ್‌ಟಿಪಿಸಿ ಶೇರುಗಳು ಶೇ. 2.84ರ ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,671 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 982 ಶೇರುಗಳು ಮುನ್ನಡೆ ಸಾಧಿಸಿದವು; 1,556 ಶೇರುಗಳು ಹಿನ್ನಡೆಗೆ ಗುರಿಯಾದವು; 133 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.