ಮುಂಬಯಿ : ಡಾಲರ್ ಎದುರು ರೂಪಾಯಿ ಚೇತರಿಕೆ, ವಿದೇಶಿ ಹೂಡಿಕೆದಾರರಿಂದ ಖರೀದಿ ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿನಲ್ಲಿ 76.85 ಅಂಕಗಳ ಏರಿಕೆಯನ್ನು ಸಾಧಿಸಿತು.
ಕಳೆದ ಐದು ದಿನಗಳ ನಿರಂತರ ವಹಿವಾಟಿನಲ್ಲಿ 738.71 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಗೆ ಇಂದು ಸ್ವಲ್ಪ ಮಟ್ಟಿನ ನಿರಾಳತೆ ಒದಗಿತು.
ಹಾಗಿದ್ದರೂ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 62.63 ಅಂಕಗಳ ನಷ್ಟದೊಂದಿಗೆ 38,095.29 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24.60 ಅಂಕಗಳ ನಷ್ಟದೊಂದಿಗೆ 11,495.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಇನ್‌ಫೋಸಿಸ್, ಸನ್ ಫಾರ್ಮಾ, ಎಸ್ ಬ್ಯಾಂಕ್, ಎಸ್‌ಬಿಐ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು.
ಟಾಪ್ ಗೇನರ್‌ಗಳು : ಸನ್ ಫಾರ್ಮಾ, ಯುಪಿಎಲ್, ಎಸ್ ಬ್ಯಾಂಕ್, ಟೆಕ್ ಮಹೀಂದ್ರ, ವಿಪ್ರೋ; ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಎಚ್‌ಯುಎಲ್, ಭಾರ್ತಿ ಇನ್‌ಫ್ರಾಟೆಲ್, ಒಎನ್‌ಜಿಸಿ, ಇಂಡಸ್ ಇಂಡ್ ಬ್ಯಾಂಕ್.
ಡಾಲರ್ ಎದುರು ರೂಪಾಯಿ ಇಂದು 20 ಪೈಸೆಗಳ ಚೇತರಿಕೆಯನ್ನು ಕಂಡು, ನಿನ್ನೆಯ ಸಾರ್ವಕಾಲಿಕ ತಳಮಟ್ಟವಾದ 71.38 ರೂ.ಗಳಿಂದ ಇಂದು 71.58 ರೂ. ಮಟ್ಟಕ್ಕೆ ಸುಧಾರಿಸಿರುವುದು ಶೇರು ಮಾರುಕಟ್ಟೆಗೆ ಕೊಂಚ ಮಟ್ಟಿನ ಸಮಾಧಾನ ನೀಡಿತು.