ಮುಂಬಯಿ : ಕಳೆದ ನಾಲ್ಕು ದಿನಗಳ ನಿರಂತರ ವಹಿವಾಟಿನಲ್ಲಿ ಬೆನ್ನುಬೆನ್ನಿಗೆ ಹೊಸ ಹೊಸ ಎತ್ತರಗಳ ದಾಖಲೆಯನ್ನು ಸೃಷ್ಟಿಸುತ್ತಲೇ ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ 32,100 ಅಂಕಗಳನ್ನು ದಾಟುವ ಸಾಧನೆಯನ್ನು ಮಾಡಿದ ಹೊರತಾಗಿಯೂ ದಿನದ ವಹಿವಾಟನ್ನು 16.63 ಅಂಕಗಳ ನಷ್ಟದೊಂದಿಗೆ 32,020.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,886.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿನ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ 660.12 ಅಂಕಗಳ ಏರಿಕೆಯನ್ನು ಸಾಧಿಸಿದೆ; ನಿಫ್ಟಿ 220.55 ಅಂಕಗಳ ಗಳಿಕೆಯನ್ನು ದಾಖಲಿಸಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಯ ಈ ಅದ್ಭುತ ನಿರ್ವಹಣೆಗೆ ಜಿಎಸ್‌ಟಿ ಜಾರಿ ಮುಖ್ಯ ಕಾರಣವೆಂದು ತಿಳಿಯಲಾಗಿದೆ. ಜತೆಗೆ ಚಿಲ್ಲರೆ ಹಣದುಬ್ಬರ ದಾಖಲೆಯ ಕೆಳಮಟ್ಟ ತಲುಪಿರುವುದು, ತತ್‌ಪರಿಣಾಮವಾಗಿ ಆರ್‌ಬಿಐ ಬಡ್ಡಿ ದರ ಕಡಿತಕ್ಕೆ ಅವಕಾಶವಾಗಿರುವುದು ಕೂಡ ಕಾರಣವಾಗಿದೆ.
ಸಾರ್ವಜನಿಕ ಶೇರು ನೀಡಿಕೆಯ ಬಳಿಕ ಈಚೆಗೆ ಲಿಸ್ಟಿಂಗ್ ಆಗಿದ್ದ ಎಯು ಸ್ಮಾಲ್ ಫಿನಾನ್ಸ್, ಸಿಡಿಎಸ್‌ಎಲ್, ಹುಡ್ಕೊ, ಎರಿಸ್ ಲೈಫ್ ಶೇರುಗಳು ಇಂದಿನ ವಹಿವಾಟಿನಲ್ಲಿ ಶೇ.5ರಿಂದ ಶೇ.11ರಷ್ಟು ಕುಸಿದದ್ದು ಗಮನಾರ್ಹವೆನಿಸಿತು.