ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 137 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ಪವರ್, ರಿಯಲ್ಟಿ, ಆಯಿಲ್ ಆ್ಯಂಡ್ ಗ್ಯಾಸ್ ಮತ್ತು ಬ್ಯಾಂಕಿಂಗ್ ಶೇರುಗಳು ಇಂದು ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾದವು. ವಿದೇಶಿ ಬಂಡವಾಳದ ಹೆಚ್ಚಿದ ಹೊರ ಹರಿವಿನ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ನಿರುತ್ಸಾಹ ಕಂಡು ಬಂತು. ಮೇಲಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ 13 ಸೆಂಟ್ಸ್‌ಗಳಷ್ಟು ಏರಿ ಬ್ಯಾರಲ್‌ಗೆ 77.45 ಡಾಲರ್ ಮಟ್ಟಕ್ಕೆ ತಲುಪಿದುದು ಕೂಡ ಶೇರು ಮಾರುಕಟ್ಟೆಯ ಕಳವಳಕ್ಕೆ ಕಾರಣವಾಯಿತು.
ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್, ಆರ್‌ಐಎಲ್, ಎಕ್ಸಿಸ್‌ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್, ಏಶ್ಯನ್ ಪೇಂಟ್ಸ್, ಮಹೀಂದ್ರ, ಹೀರೋ ಮೋಟೊ ಕಾರ್ಪ್, ಬಜಾಜ್ ಆಟೋ, ಎಸ್‌ಬಿಐ, ಎನ್‌ಟಿಪಿಸಿ, ವಿಪ್ರೋ, ಭಾರ್ತಿ ಏರ್‌ಟೆಲ್ ಶೇರುಗಳು ಶೇ.2.05 ರಷ್ಟು ಕುಸಿದವು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 108.12 ಅಂಕಗಳ ನಷ್ಟದೊಂದಿಗೆ 35,354.96 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 33.20 ಅಂಕಗಳ ನಷ್ಟದೊಂದಿಗೆ 10735.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಗುರುವಾರ ವಿದೇಶಿ ಹೂಡಿಕೆದಾರರು 525.40 ಕೋಟಿ ರೂ. ಶೇರುಗಳನ್ನು ಮಾರಿದರು. ವ್ಯತಿರಿಕ್ತವಾಗಿ ದೇಶೀಯ ಹೂಡಿಕೆದಾರ ಸಂಸ್ಥೆಗಳು 1,197.89 ಕೋಟಿ ರೂ. ಶೇರುಗಳನ್ನು ಖರೀದಿಸಿದವು.