ಮುಂಬಯಿ : ಡಾಲರ್ ಎದುರು ಕುಸಿದು ಮತ್ತೆ 72 ರೂ. ಗಡಿ ದಾಟಿದ ರೂಪಾಯಿ, ವಹಿವಾಟುದಾರರಿಂದ ಲಾಭ ನಗದೀಕರಣ, ಜಾಗತಿಕ ಶೇರು ಪೇಟೆಗಳಲ್ಲಿನ ದೌರ್ಬಲ್ಯ ಇವೇ ಮುಂತಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 350ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಏಶ್ಯನ್ ಪೇಂಟ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ತೀವ್ರ ಕುಸಿತಕ್ಕೆ ಗುರಿಯಾದವು.
ಕಳೆದ ಎರಡು ದಿನಗಳ ವಹಿವಾಟನಲ್ಲಿ 677.51 ಅಂಕಗಳ ಭರ್ಜರಿ ಮುನ್ನಡೆ ಕಂಡಿದ್ದ ಮುಂಬಯಿ ಶೇರು ಪೇಟೆಯ
ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗೆ 11.20ರ ಸುಮಾರಿಗೆ 467.65 ಅಂಕಗಳ ನಷ್ಟಕ್ಕೆ ಗುರಿಯಾಗಿ 37,622.99 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 134.30 ಅಂಕಗಳ ನಷ್ಟದೊಂದಿಗೆ 11,380.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 81 ಪೈಸೆಯ ಕುಸಿತವನ್ನು ಕಂಡ 72.65 ರೂ. ಮಟ್ಟಕ್ಕೆ ಕುಸಿದದ್ದು ಶೇರು ಮಾರುಕಟ್ಟೆಗೆ ನಿರಾಶೆ ತಂದಿತು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 1.87, ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.1.06ರ ಕುಸಿತಕ್ಕೆ ಗುರಿಯಾದವು.