ಮುಂಬಯಿ : ವಿದೇಶೀ ನೇರ ಬಂಡವಾಳದ ನಿರಂತರ ಒಳ ಹರಿವು ಮತ್ತು ಉತ್ತಮ ತ್ತೈಮಾಸಿಕ ಫಲಿತಾಂಶದ ನಿರೀಕ್ಷೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 31,802 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,807 ಅಂಕಗಳ ಹೊಸ ಎತ್ತರವನ್ನು ದಾಖಲಿಸಿದೆ.
ನಾಳೆ ಬುಧವಾರ ಬಿಡುಗಡೆಗೊಳ್ಳಲಿರುವ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪನ್ನಗಳ ಅಂಕಿ ಅಂಶಗಳು ಉತ್ತೇಜನಕಾರಿಯಾಗಿರಲಿವೆ ಎಂಬ ಲೆಕ್ಕಾಚಾರ ಕೂಡ ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಹೊಸ ಎತ್ತರವನ್ನು ಕಾಣುವುದಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 63,04 ಅಂಕಗಳ ಏರಿಕೆಯೊಂದಿಗೆ 31,778.68 ಅಂಕಗಳ ಮಟ್ಟದಲ್ಲೂ, ನಿಫ್ಟಿ 24.05 ಅಂಕಗಳ ಮುನ್ನಡೆಯೊಂದಿಗೆ 9,795.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮುಂಚೂಣಿಯ ಕಂಪೆನಿಗಳಾದ ಇನ್‌ಫೋಸಿಸ್, ಟಿಸಿಎಸ್, ಟಾಟಾ ಮೋಟರ್, ರಿಲಯನ್ಸ್, ಮತ್ತು ಎಸ್‌ಬಿಐ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಇನ್‌ಫೋಸಿಸ್, ಟಾಟಾ ಮೋಟರ್, ಮಹೀಂದ್ರ, ಟಿಸಿಎಸ್. ಟಾಪ್ ಲೂಸರ್‌ಗಳು : ಸಿಪ್ಲಾ, ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ ಮತ್ತು ಐಟಿಸಿ.
ನಿರಂತರ ಎರಡನೇ ದಿನವೂ ಮುನ್ನಡೆ ಕಂಡಿರುವ ಸೆನ್ಸೆಕ್ಸ್ ನಿನ್ನೆ 355.101 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತ್ತು. ಐಟಿ, ಟೆಕ್ನಾಲಜಿ, ಹೆಲ್ತ್ ಕೇರ್, ಆಟೋ, ಆಯಿಲ್ ಮತ್ತು ಗ್ಯಾಸ್ ವಲಯದ ಶೇರುಗಳು ಶೇ.0.97ರ ಮುನ್ನಡೆಯನ್ನು ಸಾಧಿಸಿರುವುದು ಇಂದಿನ ವಿಶೇಷ.