ಮುಂಬಯಿ : ಹಣದುಬ್ಬರ ಪ್ರಮಾಣ ದಾಖಲೆಯ ಕೆಳಟಮಟ್ಟವನ್ನು ತಲುಪಿರುವ ಕಾರಣ ಆರ್‌ಬಿಐ ಬಡ್ಡಿ ದರವನ್ನು ನಿಶ್ಚಿತವಾಗಿಯೂ ಕಡಿತಗೊಳಿಸುವುದೆಂಬ ಲೆಕ್ಕಾಚಾರದಲ್ಲಿ ಹೊಸ ಹುಮ್ಮಸ್ಸು ಪಡೆದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಚರಿತ್ರೆಯಲ್ಲೇ ಮೊತ್ತ ಮೊದಲ ಬಾರಿಗೆ 32,000 ಅಂಕಗಳ ಮಟ್ಟವನ್ನು ದಾಟಿ ಹೊಸ ದಾಖಲೆ ನಿರ್ಮಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಎತ್ತರದ ಮಟ್ಟವಾಗಿ 9,879 ಅಂಕಗಳ ಮಟ್ಟವನ್ನು ತಲುಪಿ ದಾಖಲೆ ರೂಪಿಸಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ 215.60 ಅಂಕಗಳ ಏರಿಕೆಯನ್ನು ದಾಖಲಿಸಿದ ಸೆನ್ಸೆಕ್, ಬೆಳಗ್ಗೆ 11.45ರ ಹೊತ್ತಿಗೆ 205.18 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 32,010.00 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 55.50 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 9,871.60 ಅಂಕಗಳ ಮಟ್ಟದಲ್ಲೂ ವ್ಯವಹಾರನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಎಸ್ ಬ್ಯಾಂಕ್, ಐಟಿಸಿ ಶೇರುಗಳು ಹೆಚ್ಚು ಕ್ರಿಯಾಶೀಲವಾಗಿದ್ದವು.
ಐಡಿಯಾ ಸೆಲ್ಯುಲರ್, ಐಟಿಸಿ, ಐಸಿಐಸಿಐ ಬ್ಯಾಂಕ್, ಎಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಭಾರ್ತಿ ಇನ್‌ಫ್ರಾಟೆಲ್, ಒಎನ್‌ಜಿಸಿ, ಟಾಟಾ ಮೋಟರ್, ಎಸಿಸಿ ಮತ್ತು ಮಹೀಂದ್ರ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡಿರುವುದು ಹಾಗೂ ಅಮೆರಿಕದ ಫೆಡ್ ಬ್ಯಾಂಕ್ ಮುಖ್ಯಸ್ಥರು ಯುಎಸ್ ಬಡ್ಡಿದರಗಳನ್ನು ಕ್ರಮೇಣ ಏರಿಸಲಾಗುವುದು ಎಂದು ಹೇಳಿರುವುದು ಭಾರತೀಯ ಶೇರು ಮಾರುಕಟ್ಟೆಯಲ್ಲಿನ ತೇಜಿಗೆ ಕಾರಣವಾಯಿತು.
ಕಳೆದ ಮೂರು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 444.18 ಅಂಕ ಗಳಿಸಿರುವುದು ಗಮನಾರ್ಹವಾಗಿದೆ.