ಮುಂಬಯಿ : 2018-19ರ ಹಣಕಾಸು ವರ್ಷದ ಮೊದಲ ದಿನದ ಇಂದು ಸೋಮವಾರದ ವಹಿವಾಟನ್ನು ದೃಢತೆಯೊಂದಿಗೆ ಆರಂಭಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲೇ 100 ಅಂಕಗಳ ಜಿಗಿತವನ್ನು ದಾಖಲಿಸಿದೆ.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಸ್ಥಿರತೆಯನ್ನು ಅನುಸರಿಸಿ ಏಶ್ಯನ್ ಶೇರು ಪೇಟೆಗಳು ಕ್ರಿಯಾಶೀಲವಾಗಿರುವಂತೆಯೇ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಆಟೋ, ಇನ್‌ಫ್ರಾಸ್ಟ್ರಕ್ಚರ್, ಆಯಿಲ್ ಆ್ಯಂಡ್ ಗ್ಯಾಸ್, ಕ್ಯಾಪಿಟಲ್ ಗೂಡ್ಸ್, ಹೆಲ್ತ್‌ಕೇರ್, ಐಟಿ ಮತ್ತು ಮೆಟಲ್ ಶೇರುಗಳು ಉತ್ತಮ ತೇಜಿಯನ್ನು ಕಂಡವು.
ಟಾಟಾ ಮೋಟರ್, ಮಾರುತಿ ಸುಜುಕಿ, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಬಜಾಜ್ ಆಟೋ ಶೇರುಗಳು ಶೇ.2.46ರಷ್ಟು ಏರಿದವು. ಮಾತ್ರವಲ್ಲದೆ ಅದಾನಿ ಪೋರ್ಟ್, ಡಾ. ರೆಡ್ಡಿ, ಲಾರ್ಸನ್, ಆರ್‌ಐಎಲ್, ಟಾಟಾ ಸ್ಟೀಲ್, ಎಸ್ ಬ್ಯಾಂಕ್ ಮುಂತಾಗಿ ಹಲವು ಪ್ರಮುಖ ಶೇರುಗಳ ಶೇ.1.51ರ ಏರಿಕೆಯನ್ನು ಕಂಡವು.
ಬೆಳಗ್ಗೆ 10.56ರ ಹೊತ್ತಿಗೆ ಸೆನ್ಸೆಕ್ಸ್ 141.42 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,110.10 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,160.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವಾರ್ಷಿಕ ಲೆಕ್ಕ ಪತ್ರಗಳ ಮುಗಿತಾಯದ ಕಾರಣ ಫಾರೆಕ್ಸ್ ಮತ್ತು ಹಣಕಾಸು ಮಾರುಕಟ್ಟೆ ಇಂದು ಮುಚ್ಚಿದದವು.