Advertisement

ರಾಜ್ಯದಲ್ಲಿ ಲಭ್ಯವಿದೆ ಬಿಎಸ್‌ 6 ಇಂಧನ

10:12 AM Feb 08, 2020 | mahesh |

ಮಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಬಂಕ್‌ಗಳಲ್ಲಿ ಬಿಎಸ್‌-6 ಪೆಟ್ರೋಲ್‌, ಡೀಸೆಲ್‌ ಲಭ್ಯವಾಗುತ್ತಿದೆ. ರಾಜ್ಯಕ್ಕೆ ಶೇ. 90ರಷ್ಟು ಇಂಧನ ಪೂರೈಸುತ್ತಿರುವ ಎಂಆರ್‌ಪಿಎಲ್‌ ಬಿಎಸ್‌ 4 ಇಂಧನ ಉತ್ಪಾದನೆ ಸ್ಥಗಿತಗೊಳಿಸಿ ಬಿಎಸ್‌ 6 ಇಂಧನವನ್ನೇ ಸರಬರಾಜು ಮಾಡುತ್ತಿರುವುದು ಕಾರಣ.

Advertisement

ವಾಯುಮಾಲಿನ್ಯ ತಗ್ಗಿಸುವ ಮತ್ತು ಇಂಧನ ದಕ್ಷತೆ ಹೆಚ್ಚಿಸುವ ಬಿಎಸ್‌-6 ಇಂಧನ ದಿಲ್ಲಿ ಸಹಿತ ಕೆಲವು ರಾಜ್ಯಗಳಲ್ಲಿ ಮಾತ್ರ ಲಭ್ಯವಿತ್ತು. ಎ. 1ರಿಂದ ಬಿಎಸ್‌- 6 ಇಂಧನವನ್ನಷ್ಟೇ ಒದಗಿಸಬೇಕು ಎಂದು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಕರ್ನಾಟಕದಲ್ಲಿ ಇದಕ್ಕಾಗಿ ಎಂಆರ್‌ಪಿಎಲ್‌ ಸಜ್ಜುಗೊಂಡಿದ್ದು, ರಾಜ್ಯದೆಲ್ಲೆಡೆಗೆ ಸರಬರಾಜು ಆರಂಭಿಸಿದೆ.

ಸದ್ಯ ಅದು ತನ್ನ ಹಳೆಯ ಯೂನಿಟ್‌ನಲ್ಲಿಯೇ ಬಿಎಸ್‌ 6 ಇಂಧನ ಉತ್ಪಾದಿಸುತ್ತಿದ್ದು, ಸ್ವಲ್ಪ ದುಬಾರಿಯಾಗುತ್ತಿದೆ. ಹೊಸ ಯೂನಿಟ್‌ ನಿರ್ಮಾಣ ಶೇ. 75ರಷ್ಟು ಪೂರ್ಣಗೊಂಡಿದೆ. ಒಟ್ಟು 1,810 ಕೋ.ರೂ. ವೆಚ್ಚದ ಈ ಘಟಕ ಕೆಲವೇ ತಿಂಗಳೊಳಗೆ ಕಾರ್ಯಾಚರಣೆ ಆರಂಭಿಸಿದಾಗ ಉತ್ಪಾದನ ವೆಚ್ಚವೂ ಕಡಿಮೆಯಾಗಲಿದೆ.

ರಾಜ್ಯಾದ್ಯಂತ ಸರಬರಾಜು
ಎಂಆರ್‌ಪಿಎಲ್‌ ಉತ್ಪಾದಿಸುವ ಒಟ್ಟು ಇಂಧನದ ಪೈಕಿ ಶೇ. 75ರಷ್ಟು ಕರ್ನಾಟಕದ ಒಳಗೆ ಮತ್ತು ಗೋವಾ, ಕೇರಳಕ್ಕೆ ಎಚ್‌ಪಿಸಿಎಲ್‌, ಬಿಪಿಸಿಎಲ್‌, ಐಒಸಿಎಲ್‌ ಮೂಲಕ ಸರಬರಾಜಾಗುತ್ತಿದೆ. ಪ್ರತೀ ವರ್ಷ ಸುಮಾರು 60 ಲಕ್ಷ ಟನ್‌ನಷ್ಟು ಡೀಸೆಲ್‌, 10 ಲಕ್ಷ ಟನ್‌ ಪೆಟ್ರೋಲ್‌, 10 ಲಕ್ಷ ಟನ್‌ ಎಲ್‌ಪಿಜಿಯನ್ನು ಅದು ಉತ್ಪಾದಿಸುತ್ತಿದ್ದು, ವಾರ್ಷಿಕ ಸುಮಾರು 60 ಸಾವಿರ ಕೋ.ರೂ. ವಹಿವಾಟು ನಡೆಸುತ್ತಿದೆ.

ಬಿಎಸ್‌ 4 ವಾಹನಗಳಿಗೆ ಸಮಸ್ಯೆ ಇಲ್ಲ
ಇಲ್ಲಿಯ ವರೆಗೆ ದೇಶದಲ್ಲಿ ಬಿಎಸ್‌ 4 ವಾಹನಗಳಿದ್ದವು. ಆದರೆ ಇತ್ತೀಚೆಗೆ ಬಹುತೇಕ ಹೊಸ ವಾಹನಗಳು ಬಿಎಸ್‌ 6 ಸಾಮರ್ಥ್ಯದಲ್ಲಿ ತಯಾರಾಗುತ್ತಿವೆ. ಬಿಎಸ್‌ 4 ಮತ್ತು ಅದಕ್ಕಿಂತ ಹಿಂದಿನ ಮಾದರಿಯ ವಾಹನಗಳಿಗೂ ಬಿಎಸ್‌ 6 ಇಂಧನ ಬಳಸುವುದರಿಂದ ಸಮಸ್ಯೆ ಇಲ್ಲ. ಆದರೆ ಇದರಿಂದ ಮಾಲಿನ್ಯ ಇಳಿಕೆಯ ಪ್ರಯೋಜನ ಸಿಗದು ಎಂದು ಮೂಲಗಳು ತಿಳಿಸಿವೆ.

Advertisement

ಏನಿದು ಬಿಎಸ್‌?
ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ತಡೆಯಲು ಕೇಂದ್ರ ಸರಕಾರ “ಭಾರತ್‌ ಸ್ಟೇಜ್‌’ (ಬಿಎಸ್‌) ಎಂಬ ಮಾಲಿನ್ಯ ನಿಯಂತ್ರಣ ನಿಯಮಾವಳಿ ಜಾರಿಗೆ ತಂದಿದೆ. ಇಲ್ಲಿಯ ವರೆಗೆ “ಬಿಎಸ್‌-4′ ಜಾರಿಯಲ್ಲಿತ್ತು. 2020ರ ಎ. 1ರಿಂದ “ಬಿಎಸ್‌ 6′ ಇಂಧನ ಬಳಕೆಗೆ ಸರಕಾರ ಆದೇಶಿಸಿದೆ. ಹೊಸದಾಗಿ ಉತ್ಪಾದನೆಯಾಗುವ ಎಲ್ಲ ವಾಹನಗಳು ಇದೇ ಮಾದರಿಯವು. ಪೆಟ್ರೋಲ್‌- ಡೀಸೆಲ್‌ನಲ್ಲಿ ಗಂಧಕ ಸೇರಿಸಲು ಅವಕಾಶವಿದೆ. ಆದರೆ ಅದು ಅಧಿಕವಿದ್ದಷ್ಟು ಮಾಲಿನ್ಯ ಹೆಚ್ಚು. ಬಿಎಸ್‌4ನಡಿ ಡೀಸೆಲ್‌ ಮತ್ತು ಪೆಟ್ರೋಲ್‌ಗೆ ತಲಾ 50 ಪಿಪಿಎಂ ಗಂಧಕ ಸೇರ್ಪಡೆಗೆ ಅವಕಾಶವಿದೆ. ಬಿಎಸ್‌ 6ನಲ್ಲಿ ಗಂಧಕಾಂಶ ಇನ್ನಷ್ಟು ಕಡಿಮೆ. ಹೀಗಾಗಿ ಮಾಲಿನ್ಯವೂ ಕಡಿಮೆ.

ಎಂಆರ್‌ಪಿಎಲ್‌ನಲ್ಲಿ ಬಿಎಸ್‌ 4 ಇಂಧನ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಬಿಎಸ್‌ 6 ಪೆಟ್ರೋಲ್‌, ಡೀಸೆಲ್‌ ಮಾತ್ರ ಉತ್ಪಾದಿಸಲಾಗುತ್ತಿದೆ. ಸದ್ಯ ಈಗಿರುವ ಹಳೆಯ ಘಟಕದಲ್ಲೇ ಉತ್ಪಾದನೆ ಆಗುತ್ತಿದ್ದು, ಕೆಲವೇ ತಿಂಗಳಲ್ಲಿ ಹೊಸ ಘಟಕ ಕಾರ್ಯಾರಂಭಿಸಲಿದೆ.
– ರುಡೋಲ್ಫ್ ನೊರೋನ್ಹಾ,
ಜನರಲ್‌ ಮ್ಯಾನೇಜರ್‌, ಕಾರ್ಪೊರೇಟ್‌ ಕಮ್ಯುನಿಕೇಶನ್‌, ಎಂಆರ್‌ಪಿಎಲ್‌- ಮಂಗಳೂರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next