Advertisement
ತಂದೆಗೆ 78 ವರ್ಷವಾದರೂ ಅವರಿಗೆ ವಿಶ್ರಾಂತಿ ಬೇಕು ಅನಿಸುವುದೇ ಇಲ್ಲ. ಈಗಲೂ ನಿತ್ಯ ಬೆಳಗಿನಜಾವ 5ಕ್ಕೇ ತಾವು ಅನುಮೋದನೆ ನೀಡಿದ ಕಡತಗಳನ್ನು ಮರುಪರಿಶೀಲಿಸುತ್ತಾರೆ. ವಾಕಿಂಗ್‌ಗೆ ಹೋಗಿ ಬಂದು, ದಿನದ 24 ಗಂಟೆ ದುಡಿಯುತ್ತಾರೆ. ಅವರ ಬದುಕಿನಲ್ಲಿ ವಿಶ್ರಾಂತಿ ಪಡೆದಿದ್ದನ್ನು ನಾನು ನೋಡಿಯೇ ಇಲ್ಲ. ಹಾಗಾಗಿ, ರಾಜೀನಾಮೆ ಅವರಿಗೆ ನಿವೃತ್ತಿ ಎಂದು ನಾನು ಒಪ್ಪುವುದಿಲ್ಲ. ಆದರೆ, ಅವರು ತೆಗೆದುಕೊಂಡ ತೀರ್ಮಾನ ತುಂಬಾ ಸೂಕ್ತವಾದುದು ಅನಿಸುತ್ತದೆ. ಯಾಕೆಂದರೆ, ಯಾರಿಗೂ ನೀಡದ ಅವಕಾಶವನ್ನು ಪಕ್ಷ ಅವರಿಗೆ ಕೊಟ್ಟಿದೆ. ಅಷ್ಟಕ್ಕೂ ನಮ್ಮದೇ ಸರ್ಕಾರ ಇರುತ್ತದೆ ಅಲ್ಲವೇ? ಎಲ್ಲ ಸಚಿವರೂ, ಶಾಸಕರೂ ಅವರ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಮುಂದಿನ ಇನ್ನಾವುದೋ ಉತ್ತಮ ಜವಾಬ್ದಾರಿ ಅವರಿಗೆ ಕಾಯುತ್ತಿರಬಹುದು.
Related Articles
Advertisement
ನಾನು ಬಾಲ್ಯದಿಂದಲೂ ಅಪ್ಪನ ಜನಪರ ಚಳವಳಿಗಳು, ಹೋರಾಟಗಳನ್ನು ನೋಡಿಕೊಂಡು ಬೆಳೆದವಳು. ಜೀತದಾಳು ಮುಕ್ತಿಗೆ ಅವರು ಮಾಡಿದ ಪಾದಯಾತ್ರೆ, ವಿಧಾನಸೌಧದಲ್ಲಿ ಒಬ್ಬರೇ ಇದ್ದಾಗಲೂ ಅವರು ಹೋರಾಟ, ನಂತರ ನಿಧಾನವಾಗಿ ಗೆಲುವು ಸಾಧಿಸುತ್ತಾ ಬಂದರು. ಶಿಕಾರಿಪುರದಲ್ಲಿ ಕೌನ್ಸಿಲರ್ ಚುನಾವಣೆ ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಇದ್ದಕ್ಕಿದ್ದಂತೆ ಪಟ್ಟಣದ ಅಂಗಡಿ-ಮುಂಗಟ್ಟು ಬಾಗಿಲು ಹಾಕಿದವು. ಶಾಲೆಯಲ್ಲಿದ್ದ ನಮಗೆ ಶಿಕ್ಷಕರು ಹುಷಾರಾಗಿ ಮನೆಗೆ ಕಳುಹಿಸಿದರು. ಅಲ್ಲಿ ಬಂದರೆ, ಅಪ್ಪನೊಂದಿಗೇ ಓಡಾಡಿಕೊಂಡಿದ್ದ ಚೂರಿ ಶಿವಮೂರ್ತಿ ಅಪ್ಪನ ತಲೆ ಒಡೆದಿದ್ದ. ಒಂದೆಡೆ ರಕ್ತ ಹರಿಯುತ್ತಿದೆ. ಆ ರಕ್ತವನ್ನು ನಾಯಿಗಳು ನೆಕ್ಕುತ್ತಿವೆ. ಅಂತಹ ಸಂದರ್ಭದಲ್ಲಿ ಇನ್ನು ಮುಂದೆ ನನ್ನ ಬದುಕು ಸಮಾಜಕ್ಕೆ ಮುಡಿಪು ಎಂದು ಹೇಳಿಬಿಟ್ಟರು. ಅವರ ನಿರ್ಣಯಕ್ಕೆ ಬದ್ಧರಾಗಿ ನಮ್ಮ ತಾಯಿ ಹೆಗಲು ಕೊಟ್ಟು ನಿಂತರು. ತಮ್ಮ ಷಷ್ಠ್ಯಬ್ದಿ ಕಾರ್ಯಕ್ರಮದಲ್ಲೂ ಅಪ್ಪ ಇದನ್ನು ಘೋಷಿಸಿದ್ದರು.
ನಾವ್ಯಾರೂ ಬೇಜಾರಾಗಿಲ್ಲ. ಅವರು ಅಧಿಕಾರ ಸ್ವೀಕರಿಸುವಾಗ ನಮ್ಮ ಮನೆಯಲ್ಲಿ ಎಷ್ಟು ಖುಷಿ ಇತ್ತೋ ಅಷ್ಟೇ ಸಂತೋಷ-ಖುಷಿ ನಮ್ಮಲ್ಲಿ ಇಂದೂ ಇದೆ. ಕೆಲಸ ಮಾಡಿ ನಿರಾಳವಾಗಿ ಬಂದಿದ್ದಾರೆ. ಆದರೆ, ಇದೆಲ್ಲದರ ನಡುವೆ ಅಪ್ಪ ನಮ್ಮ ಜತೆಗಿಂತ ಜನರೊಂದಿಗೆ ಇದ್ದಾಗ ಲವಲವಿಕೆಯಿಂದ ಇರುತ್ತಾರೆ. ಜೀವನದ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತಿರುತ್ತಾರೆ. ಜನರೊಂದಿಗೆ ಬದುಕಲು ಇಷ್ಟಪಡುತ್ತಾರೆ.
ಎಸ್.ವೈ. ಅರುಣಾದೇವಿ
ಬಿ.ಎಸ್. ಯಡಿಯೂರಪ್ಪ ಪುತ್ರಿ