ಬೆಂಗಳೂರು: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಆರು ದಿನಗಳ ಪ್ರವಾಸ ಮುಗಿಸಿ ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಕ್ಕೆ ಹಿಂತಿರುಗುತ್ತಿದ್ದು, ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಸಕ್ರಿಯವಾಗಲಿದೆ.
ಕಳೆದ ಜ.18ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಿ ಸಂಭಾವ್ಯರ ಪಟ್ಟಿಯನ್ನು ಸಲ್ಲಿಸಿದ್ದರು. ಆ ನಂತರ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ನಡುವೆ ಉಪಚುನಾವಣೆಯಲ್ಲಿ ಗೆದ್ದ ಶಾಸಕರ ಪೈಕಿ ಕೆಲವರು ಸಚಿವ ಸ್ಥಾನಕ್ಕಾಗಿ ವರಿಷ್ಠರ ಭೇಟಿ ಕಸರತ್ತು ಕೂಡಿ ನಡೆಸಿದ್ದರು.
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಶುಭ ಕೋರಿದ್ದ ಸಚಿವಾಕಾಂಕ್ಷಿಗಳ ಪೈಕಿ ಕೆಲವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಹಾಗಾಗಿ ಯಡಿಯೂರಪ್ಪ ಅವರು ದಾವೋಸ್ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಮತ್ತೆ ಸ್ಥಾನಮಾನಕ್ಕಾಗಿ ಲಾಬಿ ತೀವ್ರಗೊಳಿಸುವ ಸಾಧ್ಯತೆ ಇದೆ.
ಸಚಿವಾಕಾಂಕ್ಷಿಗಳಲ್ಲಿ ಆತಂಕ
ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ ಎಂಬುದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೇಳುತ್ತಿದ್ದರೂ ಆ ಹೇಳಿಕೆ ಬಗ್ಗೆ ಸಚಿವಾಕಾಂಕ್ಷಿಗಳಲ್ಲಿ ವಿಶ್ವಾಸವಿದ್ದಂತಿಲ್ಲ. ಈ ನಡುವೆ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಆರು ಮಂದಿಗಷ್ಟೇ ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ. ಆರು ಸಚಿವರು ಯಾರಾಗಬೇಕು ಎಂಬ ಬಗ್ಗೆ ಅವರಲ್ಲೇ ಚರ್ಚಿಸಿ ನಿರ್ಧರಿಸಿ ಹೆಸರು ತಿಳಿಸಲಿ ಎಂಬ ಸಂದೇಶವೂ ರವಾನೆಯಾಗಿದೆ ಎಂಬ ಮಾತಿದೆ.
ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಅವರು ಚರ್ಚಿಸಿದ ಬಳಿಕ ಬಹಳಷ್ಟು ಸಚಿವಾಕಾಂಕ್ಷಿಗಳಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ. ವಿದೇಶ ಪ್ರವಾಸದಿಂದ ಯಡಿಯೂರಪ್ಪ ಅವರು ಹಿಂದಿರುಗಿದ ಬಳಿಕ ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟತೆ ಪಡೆಯಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಒಟ್ಟಾರೆ ನಾಲ್ಕೈದು ದಿನಗಳಿಂದ ತಟಸ್ಥವಾಗದಂತಿದ್ದ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಗರಿಗೆದರುವ ಲಕ್ಷಣ ಕಾಣುತ್ತಿದೆ.