Advertisement
ಯಡಿಯೂರಪ್ಪ ಅವರ ಆ ನಿರ್ಧಾರವೂ ರಾಜ್ಯ ಬಿಜೆಪಿ ನಾಯಕರಿಗೆ ಬಹುಶಃ ಅಚ್ಚರಿ ಅನಿಸಲಿಲ್ಲವೇನೋ. ಸಹಜವಾಗಿ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ವಯಸ್ಸಾದ ಕಾರಣ ಚುನಾವಣ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಆದರೆ ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಎಲ್ಲವೂ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತಾರೆ ಎಂದು ಸಮರ್ಥನೆ ಕೊಟ್ಟು ಸುಮ್ಮನಾದರು.
Related Articles
Advertisement
ಬಿಜೆಪಿಯಲ್ಲಿ ಇಡೀ ದೇಶಕ್ಕೆ ಸಂಬಂಧಿಸಿದಂತೆ ಪಕ್ಷದ ವ್ಯವಹಾರ, ಮುಖ್ಯಮಂತ್ರಿಗಳ ನೇಮಕ, ಚುನಾವಣ ಅಜೆಂಡಾ ನಿಗದಿ ಸೇರಿ ನಿರ್ಣಾಯಕ ಹಾಗೂ ಮಹತ್ವದ ತೀರ್ಮಾನ ಕೈಗೊಳ್ಳುವುದು ಸಂಸದೀಯ ಮಂಡಳಿ ಹಾಗೂ ಕೇಂದ್ರೀಯ ಚುನಾವಣ ಸಮಿತಿ. ಇಲ್ಲಿ ನರೇಂದ್ರಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ್‌ಸಿಂಗ್, ಬಿ.ಎಲ್. ಸಂತೋಷ್ ಇರುವ ಈ ಸಮಿತಿಗಳಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿದೆ.
ಇನ್ನು ತಡಮಾಡಿದರೆ ಫಲವಿಲ್ಲ. ಇವರ ಬಿಟ್ಟರೆ ನಮಗೆ ಗೆಲುವಿಲ್ಲ. ಲಿಂಗಾಯಿತ ಸಮುದಾಯದ ಕೈ ಹಿಡಿಯದಿದ್ದರೆ, ಯಡಿಯೂರಪ್ಪ ಜತೆಗೂಡದಿದ್ದರೆ ಸದ್ಯದ ಮಟ್ಟಿಗೆ ಹಿಂದುತ್ವ ಅಥವಾ ಇತರ ವಿಚಾರಗಳೂ ಕರ್ನಾಟಕದಲ್ಲಿ ತಮ್ಮ ಕೈ ಹಿಡಿಯಲ್ಲ ಎಂದು ಯಡಿಯೂರಪ್ಪ ಅವರಿಗೆ ಪಟ್ಟ ಕಟ್ಟಿ “ಅಖಾಡ’ಕ್ಕೆ ಇಳಿಸಲಾಗಿದೆ.ದಾವಣಗೆರೆ ಅಮೃತ ಮಹೋತ್ಸವ, ಸ್ವಾತಂತ್ರೋತ್ಸವದ ತಿರಂಗ ನಡಿಗೆ ಮೂಲಕ ಜೋಶ್‌ನಲ್ಲಿದ್ದ ಕಾಂಗ್ರೆಸ್ ಪಾಳಯಕ್ಕೆ ಯಡಿಯೂರಪ್ಪ ಅವರ ನೇಮಕ “ಶಾಕ್’ ಆಗಿರುವಂತೂ ನಿಜ. ಅಷ್ಟೇ ಅಲ್ಲ ಕೇಂದ್ರದ ವರಿಷ್ಠರು ಇಂತದ್ದೊಂದು ತೀರ್ಮಾನ ಕೈಗೊಳ್ಳಬಹುದು ಎಂಬ ಊಹೆ ರಾಜ್ಯ ಬಿಜೆಪಿ ನಾಯಕರಿಗೂ ಇರಲಿಕ್ಕಿಲ್ಲ. ಮತ್ತೊಂದು ವಿಚಾರ ಎಂದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಅನಂತರ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡಿದ್ದ ಕೆಲವು ನಾಯಕರು ಇದೀಗ ಅವರ ಭೇಟಿಗಾಗಿ ಹಾತೊರೆಯುತ್ತಿರುವುದು ರಾಜಕಾರಣ ಎಂಬುದು ಗಡಿಯಾರದ ಮುಳ್ಳಿನಂತೆ ತಿರುಗುತ್ತಲೇ ಇರುತ್ತದೆ ಎಂಬುದಕ್ಕೆ ಸಾಕ್ಷಿ. ಬೊಮ್ಮಾಯಿಗೆ ಹಿನ್ನಡೆಯಾ?: ಇದೀಗ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಸಿಕ್ಕಿರುವುದರಿಂದ ರಾಜ್ಯದ ಮಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿನ್ನೆಡೆಯಾ ಎಂಬ ವ್ಯಾಖ್ಯಾನಗಳೂ ಇವೆ. ಅವರ ಒಂದು ವರ್ಷದ ಆಡಳಿತ ನೋಡಿದ ಅನಂತರ ಅವರ ನಾಯಕತ್ವದಲ್ಲೇ ಹೋದರೆ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗಬಹುದು ಎಂದು ಯಡಿಯೂರಪ್ಪ ಅವರಿಗೆ ಮಣೆ ಹಾಕಲಾಗಿದೆ. ಹಾನಗಲ್ ವಿಧಾನಸಭೆ ಉಪಚುನಾವಣೆ ಸೋಲು, ಬೆಳಗಾವಿಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮಹಂತೇಶ್ ಕವಟಗಿಮಠ ಸೋಲು, ಅನಂತರ ಪದವೀಧರ ಕ್ಷೇತ್ರಗಳಲ್ಲಿ ಅರುಣ್ ಶಹಾಪುರ, ರವಿಶಂಕರ್ ಸೋಲು, ಹಿಂದೂ ಕಾರ್ಯಕರ್ತರ ಹತ್ಯೆ ಘಟನೆ ಅನಂತರದ ವಿದ್ಯಮಾನ, ಸಿದ್ದರಾಮಯ್ಯ ಅಮೃತ ಮಹೋತ್ಸವ ಎಲ್ಲವನ್ನೂ ಹೈಕಮಾಂಡ್ ಗಮನಿಸಿಯೇ ನಿರ್ಧಾರ ಕೈಗೊಂಡಿದೆ ಎಂಬ ಮಾತುಗಳಿವೆ. ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡಿರುವುದರ ಹಿಂದೆ ಇನ್ನೂ ಸಾಕಷ್ಟು ಬದಲಾವಣೆಗಳ ಮುನ್ಸೂಚನೆಯೂ ಇದೆ ಎಂಬ ಮಾತು ಬಿಜೆಪಿ ವಲಯದಿಂದಲೇ ಬರುತ್ತಿದೆ. ಚುನಾವಣೆ ಸಮೀಪ ತೀರಾ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ ನಾಯಕತ್ವ ಬದಲಾವಣೆ ಎಂದಾದರೆ ಯಾರಿಗೆ? ಒಕ್ಕಲಿಗ, ದಲಿತ, ಹಿಂದುಳಿದ ವರ್ಗದಲ್ಲಿ ಯಾವ ಸಮುದಾಯಕ್ಕೆ ಮಣೆ ಹಾಕುವುದು, ಅದರಿಂದಾಗಬಹುದಾದ ಲಾಭ-ನಷ್ಟ ಏನು ಎಂಬುದರ ಲೆಕ್ಕಾಚಾರವೂ ನಡೆದಿದೆ ಎಂಬುದು ದಿಲ್ಲಿ ಮಟ್ಟದಲ್ಲಿ ಹರಿದಾಡುತ್ತಿರುವ ಸುದ್ದಿ. ಹೀಗಾಗಿ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಸಿದ್ದು ವೇಗಕ್ಕೆ ಬ್ರೇಕ್ ಹಾಕುವ ಪ್ರಯತ್ನ : ಇದೀಗ ಯಡಿಯೂರಪ್ಪ ಅವರ ನೇಮಕದಿಂದ ಬಿಜೆಪಿಯಲ್ಲಂತೂ ಹೊಸ ಉತ್ಸಾಹ ಮೂಡಿದೆ. ರಾಜ್ಯ ಪ್ರವಾಸ ಮಾಡಿ 150 ಸ್ಥಾನದೊಂದಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ, ಬೇರೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲು ಬಿಡಲ್ಲ ಎಂದೂ ಯಡಿಯೂರಪ್ಪ ಘರ್ಜಿಸಿದ್ದಾರೆ. ವರಿಷ್ಠರು ತಮ್ಮನ್ನು ನಿರ್ಲಕ್ಷ್ಯ ಮಾಡಿಬಿಟ್ಟರಾ ಎಂಬ ಕೊರಗು ಯಡಿಯೂರಪ್ಪ ಅವರ ಅಂತರಂಗದಲ್ಲಿದ್ದದ್ದು ನಿಜ. ಪುತ್ರನನ್ನು ಪರಿಷತ್ ಸದಸ್ಯ ಮಾಡಲು, ಸಚಿವ ಸ್ಥಾನ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಅಂತದ್ದೊಂದು ಅನುಮಾನ ಬಂದಿರಲು ಸಹಜ. ಆದರೆ ಯಾವಾಗ ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿಯಲ್ಲಿ ಸ್ಥಾನ ಸಿಕ್ಕಿತೋ ಯಡಿಯೂರಪ್ಪ ಅವರಲ್ಲಿ ಮತ್ತೆ ಉತ್ಸಾಹ ಬಂದಿದೆ. ಬಹುಶಃ ತಿರುಪತಿಯಲ್ಲಿ ಅವರ ಜತೆ ಇದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ “ಮಾನಸಪುತ್ರ’ ಆರ್.ಅಶೋಕ್ ಅವರಿಗೆ ಅದು ಅನುಭವಕ್ಕೆ ಬಂದಿರಲಿಕ್ಕೂ ಸಾಕು. ಮುಂದಿನ ಚುನಾವಣೆಗೆ ರೆಡಿಯಾಗೋಣ, ಪ್ರವಾಸ ಮಾಡೋಣ, ಎಲ್ಲೂ ತಪ್ಪಾಗದಂತೆ, ಎಡವಟ್ಟು ಆಗದಂತೆ ನೋಡಿಕೊಳ್ಳೋಣ, ಕಾಂಗ್ರೆಸ್-ಜೆಡಿಎಸ್‌ಗೆ ನಾವಾಗಿಯೇ “ಅಸ್ತ್ರ’ ಕೊಡುವುದು ಬೇಡ ಎಂದು ಜಪ ಮಾಡುತ್ತಿದ್ದರಂತೆ. ಇದು ಯಡಿಯೂರಪ್ಪ ಅವರು ಚುನಾವಣೆಗೆ ಸಜ್ಜಾಗುವ ಶೈಲಿ. ಯಡಿಯೂರಪ್ಪ ಅವರನ್ನು ಸುಮ್ಮನೆ ಬಿಟ್ಟರೆ ಕಷ್ಟ, ಹೀಗಾಗಿ, ನಾಮ್‌ಕಾವಾಸ್ತೆ ಸ್ಥಾನಮಾನ ನೀಡಿ ಸುಮ್ಮನಾಗಿಸಲಾಗಿದೆ. ಜತೆಗೆ, ಚುನಾವಣೆಯಲ್ಲಿ ಗೆಲ್ಲಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಅವರೇ ಚುನಾವಣೆ ನಿವೃತ್ತಿ ಘೋಷಿಸಿದ್ದಾರೆ ಹೀಗಾಗಿ, ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುವುದಿಲ್ಲ. ಹೀಗಾಗಿ, ಅಪಾಯವೇನೂ ಇಲ್ಲ ಎಂದು ಬಿಜೆಪಿ ಜಾಣ ಹೆಜ್ಜೆ ಇಟ್ಟಿದೆ. ಆದರೆ ತಮಗಲ್ಲದಿದ್ದರೂ ಪುತ್ರನ ಭವಿಷ್ಯಕ್ಕಾದರೂ ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡಲಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ. ಎಚ್‌ಡಿಕೆ-ಡಿಕೆಶಿ ಸಹಕಾರ
ಅತ್ತ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಎಫೆಕ್ಟ್ ಎಂಬಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಇತ್ತ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ಸಿಕ್ಕ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಅದು ಹಿರಿಯೂರಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆದರೆ ನನ್ನ ಸಹಕಾರ ಇರುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಸಮುದಾಯಕ್ಕೆ ಸಂದೇಶ ರವಾನಿಸಿದ್ದಾರೆ. ಮತ್ತೆ ಅತಂತ್ರದ ನಿರೀಕ್ಷೆಯಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಗುವ ನಿರೀಕ್ಷೆಯಲ್ಲಿರುವ ಕುಮಾರಸ್ವಾಮಿ ಹೇಳಿಕೆ ಹಿಂದೆ ಬೇರೆಯದೇ ಲೆಕ್ಕಾಚಾರವೂ ಇದೆ. ರಾಜ್ಯ ರಾಜಕಾರಣದ ಸತ್ವವೇ ಹಾಗೆ. ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಕೇಂದ್ರಿತವಾಗಿ ಏನೇ ನಡೆದರೂ, ರಾಜಕೀಯವಾಗಿ ಅವರು ನೀಡುವ ಹೇಳಿಕೆ ಹಾಗೂ ರೂಪಿಸುವ ಕಾರ್ಯತಂತ್ರ ಅಂತಿಮವಾಗಿ ಬೇರೆಯದೇ ಗುರಿಯತ್ತ ಚಿತ್ತ ಹರಿಸಿರುತ್ತದೆ. ಮುಂದಿನ ಸಿಎಂ ಲಿಂಗಾಯಿತ, ಒಕ್ಕಲಿಗ, ಹಿಂದುಳಿದ ಸುತ್ತ ಗಿರಕಿ ಹೊಡೆಯುವುದು ನಿಶ್ಚಿತ. ಇದರ ನಡುವೆ ದಲಿತ ಸಿಎಂ, ಮುಸ್ಲಿಂ ಡಿಸಿಎಂ ಅವಕಾಶ ಸಿಕ್ಕರೆ ರಾಜ್ಯದ ರಾಜಕೀಯ ಇತಿಹಾಸದಲ್ಲೊಂದು ಹೊಸ ಅಧ್ಯಾಯ ಶುರುವಾದಂತೆ. -ಎಸ್. ಲಕ್ಷ್ಮೀನಾರಾಯಣ