ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಬಾರದು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸವಾಲು ಹಾಕಿ ಲಿಖಿತ ಹಾಗೂ ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ.
ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಬಿಜೆಪಿ ಕಾರ್ಯಕರ್ತರಿಗಾದರೂ ಸಮಾಧಾನ ತಂದರೆ ಮೋದಿಯವರು ಟೀಕೆಗೆ ಅರ್ಹರೋ ಅಥವಾ ಪ್ರಶ್ನಾತೀತರೋ ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
2014ಕ್ಕೂ ಮೊದಲು ಮನಮೋಹನ್ ಸಿಂಗ್ ಅವರ ಸರಕಾರ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಿತ್ತು, ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಯಾರ್ಯಾರ ಎಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ ಎಂಬುದಕ್ಕೆ ಮೊದಲು ಯಡಿಯೂರಪ್ಪ ಉತ್ತರಿಸಲಿ ಎಂದು ಕೇಳಿದ್ದಾರೆ.
ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು, ಈಗ ಎಷ್ಟಿದೆ. ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ, ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ. 8ಕ್ಕೆ ಇಳಿಸಿದ್ದು ಏಕೆ ಎಂಬುದನ್ನು ಉತ್ತರಿಸಿ ಎಂದು ಹೇಳಿದ್ದಾರೆ.
2014ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‌ಗಳ ಮೇಲೆ ವಿಧಿಸುತ್ತಿದ್ದ ಸೆಸ್‌ಗಳೆಷ್ಟು, ಮೋದಿ ವಿಧಿಸುತ್ತಿರುವ ಸೆಸ್ ಪ್ರಮಾಣವೆಷ್ಟು? 2014ಕ್ಕೆ ಮೊದಲು ದೇಶದಲ್ಲಿ ನಿರುದ್ಯೋಗದ ಪ್ರಮಾಣ ಎಷ್ಟಿತ್ತು ಈಗ ಎಷ್ಟಿದೆ ಎಂಬುದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.