Advertisement

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

12:37 AM Jul 26, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ವಿಚಾರ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅವರು ಸೋಮವಾರ ಪದತ್ಯಾಗ ಮಾಡುತ್ತಾರೆಯೇ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ.

Advertisement

ರವಿವಾರ ಸಂಜೆ ಹೊತ್ತಿಗೆ ಪಕ್ಷದ ವರಿಷ್ಠರಿಂದ ಸಂದೇಶ ಬರಲಿದೆ ಎಂಬ ವರದಿಗಳ ನಡುವೆಯೇ “ಪಕ್ಷದ ವರಿಷ್ಠರು ಸೂಚನೆ ನೀಡಿದರೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಒತ್ತಿ ಹೇಳುವ ಮೂಲಕ ಯಡಿಯೂರಪ್ಪ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಸೋಮವಾರಕ್ಕೆ ಎರಡು ವರ್ಷ ಪೂರೈಸುತ್ತಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸೋಮವಾರ ಮಧ್ಯಾಹ್ನ ರಾಜ್ಯಪಾಲರ ಜತೆ ಮಾತುಕತೆಗೆ ಸಮಯ ನಿಗದಿಪಡಿಸಿಕೊಂಡಿದ್ದಾರೆ ಎಂಬ ವರದಿ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ರವಿವಾರ ವರಿಷ್ಠರಿಂದ ಸಂದೇಶ ಬರಲಿದೆ ಎಂಬ ಸುದ್ದಿಗಳ ನಡುವೆಯೇ ಬೆಳಗಾವಿ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಯಡಿಯೂರಪ್ಪ “ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ’ ಎಂದು ನಾಲ್ಕೈದು ಬಾರಿ ಹೇಳಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಯಿತು.

ಇನ್ನೊಂದೆಡೆ ಗೋವಾದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು “ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ’ ಎಂದು ಹೇಳಿದರೆ, ಮತ್ತೂಂದೆಡೆ ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, “ಬಿಎಸ್‌ವೈ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ. ಇವೆರಡೂ ಬೇರೆ ಬೇರೆಯದೇ ವ್ಯಾಖ್ಯಾನಗಳನ್ನು ಹುಟ್ಟುಹಾಕಿದ್ದು, ದಿನವಿಡೀ ಗೊಂದಲ ಗೂಡಾಯಿತು.

ವರಿಷ್ಠರು ಇಕ್ಕಟ್ಟಿಗೆ?
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊನೇ ಘಳಿಗೆಯಲ್ಲಿ ಪ್ರವಾಹ ಪೀಡಿತ ಜಿಲ್ಲೆಗೆ ತೆರಳಿ ತಮ್ಮದೇ ರೀತಿಯಲ್ಲಿ ರಾಜಕೀಯ ಸಂದೇಶ ನೀಡಿದ್ದಾರೆ. ಇಂತಹ ಕಠಿನ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಗೆ ಸೂಚಿಸಿದರೆ ಭವಿಷ್ಯದಲ್ಲಿ ಬಿಜೆಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಬಿಎಸ್‌ವೈ ಹೇಳಿಕೆ ಹಿಂದಿನ ಗುಟ್ಟೇನು?
“ವರಿಷ್ಠರು ಸಂದೇಶ ಕಳುಹಿಸಿದರೆ ಪಾಲಿಸುವೆ, ಕಾದು ನೋಡೋಣ’
1. “ರಾಜೀನಾಮೆಯ ಸಂದೇಶ ಕಳುಹಿಸಿ’ ಎನ್ನುವ ಬಹಿರಂಗ ಸವಾಲು?
2. ಇಂಥ ಕಠಿನ ಸಂದರ್ಭದಲ್ಲಿ ಬದಲಾಯಿಸಿ ನೋಡಿ ಎಂಬ ಪಂಥಾಹ್ವಾನ?
3. ನಿರ್ಲಿಪ್ತವಾಗಿದ್ದು, ಅನುಕಂಪ ಮೂಡಿಸುವ ತಂತ್ರ?

ದಿನದ ತಿರುವು
1. ವರಿಷ್ಠರ ಸಂದೇಶದ ನಿರೀಕ್ಷೆಯ ನಡುವೆ ಬೆಳಗಾವಿ ಪ್ರವಾಹ ವೀಕ್ಷಣೆ, ನಿರ್ಲಿಪ್ತವಾಗಿ ಕರ್ತವ್ಯ ನಿರ್ವಹಣೆ.
2. ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ಬಂದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂಬ ಸ್ಪಷ್ಟ ಹೇಳಿಕೆ.
3. ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂಬ ಸಿ.ಟಿ. ರವಿ ಹೇಳಿಕೆ.
4. ಬಿಎಸ್‌ವೈ ಉತ್ತಮ ಕೆಲಸ ಮಾಡಿದ್ದಾರೆ, ರಾಜಕೀಯ ಗೊಂದಲ ಇಲ್ಲ ಎಂಬ ಜೆ.ಪಿ. ನಡ್ಡಾ ಮಾತು.
5. ಸೋಮವಾರ ಅಪರಾಹ್ನ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವೆ ಎಂಬ ಬಿಎಸ್‌ವೈ ಹೇಳಿಕೆ
6. ಗಣಿ ಸಚಿವ ಮುರುಗೇಶ್‌ ನಿರಾಣಿ ದಿಲ್ಲಿ ಭೇಟಿಯ ದಿಢೀರ್‌ ಬೆಳವಣಿಗೆ.

ದಿಲ್ಲಿಗೆ ತೆರಳಿದ ಜೋಶಿ
ಜುಲೈ 26ರಂದು ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಂಭಾವ್ಯರಲ್ಲಿ ಒಬ್ಬರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ರವಿವಾರ ಮಧ್ಯಾಹ್ನದ ವರೆಗೂ ಬೆಂಗಳೂರಿನಲ್ಲಿದ್ದರು. ಆದರೆ ಜು. 26ರಂದೇ ಯಡಿಯೂರಪ್ಪ ರಾಜೀನಾಮೆ ನೀಡುವುದು ಅನುಮಾನ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಹ್ಲಾದ್‌ ಜೋಶಿ ರವಿವಾರ ಸಂಜೆ ದಿಲ್ಲಿಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next