ಶಿವಮೊಗ್ಗ : ಜಿಲ್ಲೆಯ ಹುಣಸೋಡಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅಧಿಕಾರಿಗಳೋಂದಿಗೆ ಹುಣಸೋಡು ಗ್ರಾಮದ ಕ್ವಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗುರುವಾರ ರಾತ್ರಿ ನಡೆದ ದುರ್ಘಟನೆಯಲ್ಲಿ 6 ಜನ ಮೃತಪಟ್ಟಿದ್ದು, ಮೃತರಿಗೆ ಸರಕಾರದಿಂದ ಐದು ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದೇವೆ. ಸ್ಫೋಟಕಗಳ ಬಗ್ಗೆ ಹೈದ್ರಾಬಾದ್ ತಂಡ ಪರಿಶೀಲನೆಯನ್ನು ಮಾಡಿದೆ. ಜೊತೆಗೆ ಡಿಸಿ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದಲೂ ತನಿಖೆಯಾಗುತ್ತಿದೆ. ಸ್ಫೋಟಕಗಳ ಮಾರಾಟ, ಬಳಕೆ ಆಯಾಮದಲ್ಲೂ ಇನ್ನಷ್ಟು ತನಿಖೆ ಮಾಡಬೇಕಿದೆ ಎಂದರು.
ಘಟನೆ ನಡೆದಿರುವ ಈ ಭಾಗದ ಎಲ್ಲಾ ಕ್ರಷರ್ ಗಳು ಸರ್ಕಾರದ ಅನುಮತಿ ಪಡೆದಿವೆ. ಆದರೆ ಕ್ರಷರ್ ಗಳಲ್ಲಿ ಕ್ವಾರಿ ನಡೆಸಲು ಯಾವುದೇ ಅನುಮತಿಯಲ್ಲ. ಎಕೋ ಸೆನ್ಸಿಟಿವ್ ಝೋನ್ ಆಗಿರುವುದರಿಂದ ಪ್ರಕರಣದ ಮರು ಪರಿಶೀಲನೆ ಬಗ್ಗೆ ಪ್ರಸ್ತಾವ ಬಂದಿದ್ದು, ಈ ಕುರಿತು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ: ಆಸ್ಟ್ರೇಲಿಯಾಕ್ಕೆ ಗೂಗಲ್ ಬೆದರಿಕೆ
ತನಿಖೆಯಿಂದಲೇ ಎಲ್ಲವೂ ಸ್ಪಷ್ಟ ಆಗಬೇಕಾಗಿರುವುದರಿಂದ ತನಿಖಾ ವರದಿ ಬರುವವರೆಗೆ ಕಾಯಬೇಕು. ಯಾರೇ ಅಪರಾಧಿ ಆದರೂ ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದಿದ್ದಾರೆ.