ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು
ಪಂಚಾಯಿತ್ ಸದಸ್ಯ ಸ್ಥಾನದಿಂದ ಹಿಡಿದು ಮುಖ್ಯ ಮಂತ್ರಿವರೆಗೆ ಬಿ.ಎಸ್.ಯಡಿಯೂರಪ್ಪ ಪಯಣ ನಿಜಕ್ಕೂ ರೋಚಕ ಮತ್ತು ಸ್ಫೂರ್ತಿದಾಯಕ.
ಯಡಿಯೂರಪ್ಪ ಮತ್ತು ತಮಗೆ ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಯಡಿಯೂರಪ್ಪ ನಾಡು ಕಂಡ ಹೋರಾಟಗಾರ. ಹಿಡಿದಿದ್ದನ್ನು ಸಾಧಿಸುವ ಛಲದಂಕ ಮಲ್ಲ. ಅವರು ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಅತ್ಯುನ್ನತ ಸ್ಥಾನಕ್ಕೆ ಬಂದವರಲ್ಲ. ಬೇರು ಮಟ್ಟದಿಂದ ಬಹಳ ಕಷ್ಟಪಟ್ಟು ಸ್ವಂತ ಸಾಮರ್ಥ್ಯ ಹಾಗೂ ಹೋರಾಟದ ಮೂಲಕ ದೊಡ್ಡ ಸ್ಥಾನಕ್ಕೆ ಏರಿದವರು. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಭೀಮನ ಬಲ ಇರಬೇಕು, ವಿದುರನ ನೀತಿ ಇರಬೇಕು, ಧರ್ಮರಾಯನ ಧರ್ಮ ಇರಬೇಕು, ದಾನ ಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಕೃಷ್ಣನ ತಂತ್ರ ಇರಬೇಕು, ಅದರ ಜತೆಗೆ ಯಡಿಯೂರಪ್ಪನವರ ಛಲ ಇರಬೇಕು.
ಬಿಜೆಪಿ ಅಧಿಕಾರಕ್ಕೆ ತಂದವರು: ಯಡಿಯೂರಪ್ಪ ಅವರನ್ನು ಬಿಜೆಪಿ ಅಧಿಕಾರಕ್ಕೆ ತರಲಿಲ್ಲ. ಬದಲಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅವರು. ಆಲದಮರ ದಂತಿರುವ ಯಡಿಯೂರಪ್ಪ ಅವರ ನೆರಳಲ್ಲಿ ಅನೇಕರು ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ, ರಾಜಕೀಯ ಎಂಬುದು ತಂತ್ರ, ಪ್ರತಿತಂತ್ರ, ಕುತಂತ್ರಗಳ ಚಕ್ರ. ಅದರ ತಿರುಗಣಿಗೆ ಸಿಕ್ಕ ಯಡಿಯೂರಪ್ಪ ವಿದಾಯದ ಹೊಸ್ತಿಲಲ್ಲಿದ್ದಾ ರೆ. ಆದರೆ ಈ ವಿದಾಯ ಅವರೇ ತಂದು ಕೊಂಡದ್ದಲ್ಲ. ತಾವು ಬೆಳೆಸಿದ ಪಕ್ಷದಿಂದಲೇ ಹೇರಲ್ಪಟ್ಟಿದ್ದು. ಅದು ಬಿಜೆಪಿಯ ಆಂತರಿಕ ವಿಚಾರ. ಆದರೆ ಯಡಿಯೂರಪ್ಪ ಅವರಿಂದ ಬೆಳೆದವರೇ ಅವರಿಗೆ ಮನೆಯ ದಾರಿ ತೋರಿದ್ದು ಮಾತ್ರ ದುರಂತ. ಇದು ಯಡಿಯೂರಪ್ಪ ಅವರ ಬದುಕಿನ ಬಹುದೊಡ್ಡ ದುರಂತ.
ಯಡಿಯೂರಪ್ಪ ಅವರ ಪರಿಶ್ರಮದ ಬೆವರು, ರಕ್ತದಿಂದ ಬಲಿಷ್ಟವಾದ ಬಿಜೆಪಿ, ಅವರ ಪರಿಶ್ರಮಕ್ಕೆ, ತ್ಯಾಗಕ್ಕೆ ನೀಡಬೇಕಾದ ಗೌರವ ನೀಡಲಿಲ್ಲ. ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ವಿದಾಯ ಹೇಳಿಸಿದರು. ನಾವು ರಾಜಕೀಯವಾಗಿ ಯಡಿಯೂರಪ್ಪ ಅವರ ವಿರುದ್ಧ ಏನೇ ಟೀಕೆ ಟಿಪ್ಪಣಿ ಮಾಡಿರಬಹುದು. ಆದರೆ ಅವರು ನಂಬಿದವರೇ ಅವರನ್ನು ರಾಜಕೀಯವಾಗಿ ಮುಗಿಸಿದ್ದನ್ನು ಅವರ ರಾಜಕೀಯ ವಿರೋಧಿಗಳಾದ ನಮಗೂ ಜೀರ್ಣಿಸಿಕೊಳ್ಳುವುದು ಕಷ್ಟ.