ಶಿವಮೊಗ್ಗ/ಹಾವೇರಿ/ಜಮಖಂಡಿ: ಮೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದ್ದು, ಏತನ್ಮಧ್ಯೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಪುತ್ರನ ಸಾವಿನ ಕುರಿತು ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್, ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಕೂಡಲೇ ಕ್ಷಮೆಯಾಚಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಜನಾರ್ದನ ರೆಡ್ಡಿ ಅವರದ್ದೇನು ರಾಜಮನೆತನವಾ: ಸಿದ್ದರಾಮಯ್ಯ
ಜನಾರ್ದನ ರೆಡ್ಡಿಗೆ ಕಲ್ಚರ್ ಇಲ್ಲ ಜೊತೆಗೆ ಮಾನವೀಯತೆಯೂ ಇಲ್ಲ. ಸಾರ್ವಜನಿಕ ಜೀವನದಲ್ಲಿ ಇಂತಹ ಮಾತುಗಳನ್ನು ಒಪ್ಪುತ್ತಾರೇನ್ರಿ? ಯಾರಾದ್ರೂ ಅಂಥ ಮಾತುಗಳನ್ನು ಆಡುತ್ತಾರಾ? ರಾಜಕಾರಣದಲ್ಲಿ ಟೀಕೆ, ಟಿಪ್ಪಣಿ ಮಾಡುವುದು ಸರಿ. ಕುಟುಂಬದ ವಿಚಾರಕ್ಕೆ ಬರುವುದು ಎಂತಹ ಸಂಸ್ಕೃತಿ. ಜನಾರ್ದನ ರೆಡ್ಡಿ ಅವರದ್ದೇನು ರಾಜಮನೆತನವಾ, ರಿಕವರಿ ಮಾಡುವ ಮೊದಲೇ ಎಲ್ಲವನ್ನೂ ಸಾಗಿಸಿದ್ದರು. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಲೋಕಾಯುಕ್ತ ವರದಿಯೇ ನೀಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪುತ್ರ ಶೋಕ ನೋವಿನ ವಿಚಾರ; ಆರ್ ವಿ ದೇಶಪಾಂಡೆ
ಪುತ್ರ ಶೋಕ ಎನ್ನುವುದು ತುಂಬಾ ನೋವಿನ ವಿಚಾರ. ಯಾರೇ ಆಗಲಿ ಇಂತಹ ಹೇಳಿಕೆಯನ್ನು ನೀಡಬಾರದು. ರೆಡ್ಡಿ ಹೇಳಿಕೆ ರಾಜಕೀಯವಾಗಿ ಒಳ್ಳೆಯ ಬೆಳವಣಿಗೆ ಅಲ್ಲ. ಅಭಿವೃದ್ಧಿ, ಲೋಪ, ದೋಷಗಳ ಕುರಿತು ಚರ್ಚೆ, ಟೀಕೆ ನಡೆಯಲಿ ಎಂದು ಆರ್ ವಿ ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ವೈಯಕ್ತಿಕ ಟೀಕೆ ಸಲ್ಲದು: ಪರಮೇಶ್ವರ್
ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಜನಾರ್ದನ್ ರೆಡ್ಡಿ ಅಂತಹ ಮಾತುಗಳನ್ನು ಆಡಬಾರದಿತ್ತು. ಇದು ಕೀಳು ಮಟ್ಟದ ರಾಜಕೀಯ ಎಂದು ಡಿಸಿಎಂ ಪರಮೇಶ್ವರ್ ಜಮಖಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಜನಾರ್ದನ್ ರೆಡ್ಡಿ ಕೂಡಲೇ ಕ್ಷಮೆಯಾಚಿಸಬೇಕು: ಬಿಎಸ್ ಯಡಿಯೂರಪ್ಪ
ಜನಾರ್ದನ್ ರೆಡ್ಡಿ ನೀಡಿದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ರೆಡ್ಡಿ ನೀಡಿದ ಹೇಳಿಕೆ ಶೋಭೆ ತರುವುದಿಲ್ಲ. ಕೂಡಲೇ ಈ ಬಗ್ಗೆ ರೆಡ್ಡಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಜನಾರ್ದನ ರೆಡ್ಡಿ ಮಾತನಾಡಿದ್ದು ತಪ್ಪು:ಆರ್ ಅಶೋಕ್
ಜನಾರ್ದನ್ ರೆಡ್ಡಿ ಆ ರೀತಿ ಮಾತನಾಡಿದ್ದು ತಪ್ಪು. ರಾಜಕೀಯವಾಗಿ ಮೌಲ್ಯಯುತ ಚರ್ಚೆ ನಡೆಸಬೇಕೆ ಹೊರತು, ಯಾರೂ ಸಹ ವೈಯಕ್ತಿಕವಾಗಿ ಚರ್ಚಿಸಬಾರದು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.