Advertisement

ಬಿಎಸ್‌ವೈಗೆ ಕ್ಷೇತ್ರ ಬಿಡಲು ಪೈಪೋಟಿ

06:00 AM Sep 18, 2017 | Team Udayavani |

ಬೆಂಗಳೂರು: ಬಿಎಸ್‌ವೈ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯ ನಡುವೆಯೇ, ಆ ಭಾಗದ ಹಾಲಿ ಮತ್ತು ಮಾಜಿ ಶಾಸಕರು ಕ್ಷೇತ್ರ ಬಿಟ್ಟುಕೊಡಲು ಪೈಪೋಟಿಗಿಳಿದಿದ್ದಾರೆ.

Advertisement

ಭಾನುವಾರ ಬಿ.ಎಸ್‌.ಯಡಿಯೂರಪ್ಪ ಅವರನ್ನು ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿದ್ದ ಮುರುಗೇಶ್‌ ನಿರಾಣಿ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಬಿಜೆಪಿ ನಾಯಕರು, ತಮ್ಮ ಕ್ಷೇತ್ರದಲ್ಲೇ ಒಂದನ್ನು ಆಯ್ದುಕೊಳ್ಳಿ ಎಂದಿದ್ದಾರೆ. ನಿರಾಣಿ ಅವರು ತಮ್ಮ ಕ್ಷೇತ್ರ ಬೀಳಗಿ ಅಥವಾ ಹಿಂದೆ ಸ್ಪರ್ಧಿಸಿದ್ದ ಜಮಖಂಡಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಘೋಷಿಸಿದರು.

ಅಲ್ಲದೆ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿದ್ದು ಮುಧೋಳ ಮೀಸಲು ಕ್ಷೇತ್ರವಾಗಿದೆ. ಉಳಿದ ಆರರಲ್ಲಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳ ಕೆಲವು ಹಾಲಿ ಮತ್ತು ಮಾಜಿ ಶಾಸಕರೂ ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ದೂರವಾಣಿ ಕರೆ ಮಾಡಿ ಹೇಳಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈ ಎತ್ತ?
ಈ ಮಧ್ಯೆ ಬಿಎಸ್‌ವೈ ಅವರು ಹಾವೇರಿ, ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಗಳ ಪೈಕಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಅದರಲ್ಲೂ ಬಾಗಲಕೋಟೆ ಅಥವಾ ವಿಜಯಪುರದಲ್ಲಿ ಲಿಂಗಾಯಿತರೇ ಪ್ರಾಬಲ್ಯ ಹೊಂದಿದ್ದಾರೆ. ಇಲ್ಲಿ ಕಣಕ್ಕಿಳಿದರೆ ತಮಗೂ ಮತ್ತು ಪಕ್ಷಕ್ಕೂ ಲಾಭ ಎಂಬುದು ಬಿಎಸ್‌ವೈ ಅವರ ಚಿಂತನೆ.
ಇದಷ್ಟೇ ಅಲ್ಲ, ಪಕ್ಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಬಗ್ಗೆಯೂ ಒಲವಿದೆ ಎಂದು ಹೇಳಲಾಗಿದ್ದು, ಇಲ್ಲಿಗೆ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯಪುರದಿಂದ ಹೆಚ್ಚಿನ ಒತ್ತಡ
ಪಕ್ಷ ಮತ್ತು ಬಿಎಸ್‌ವೈಗೆ ಅನುಕೂಲವಾಗಬೇಕಾದರೆ ಬಾಗಲಕೋಟೆ ಅಥವಾ ವಿಜಯಪುರವೇ ಸೂಕ್ತ ಎಂಬ ಅಭಿಪ್ರಾಯ ಅವರ ಆಪ್ತ ವಲಯದಿಂದ ಕೇಳಿಬಂದಿದೆ. ಬಾಗಲಕೋಟೆಯ ತೇರದಾಳ (2008ರಲ್ಲಿ ಸಿದ್ದು ಸವದಿ ಗೆದ್ದಿದ್ದರೆ, ಕಳೆದ ಬಾರಿ ಉಮಾಶ್ರೀ ಜಯಗಳಿಸಿದ್ದರು), ವಿಜಯಪುರ ನಗರ ಅಥವಾ ಬಸವನ ಬಾಗೇವಾಡಿ ಕ್ಷೇತ್ರಗಳೂ ಸೂಕ್ತ ಎಂಬ ಒತ್ತಾಯ ಕೇಳಿಬಂದಿದೆ.

Advertisement

ಸದ್ಯ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದವರು. ಈ ಹೋರಾಟದ ಮೂಲಕ ಜಿಲ್ಲೆ ಸೇರಿ ಸುತ್ತಮುತ್ತಲಿನ ಭಾಗದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಪಾಟೀಲರಿಗೆ ಪ್ರತ್ಯುತ್ತರ ನೀಡಲು ಯಡಿಯೂರಪ್ಪ ಅವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಅಲ್ಲದೆ ಇಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದು, ಪಕ್ಷಕ್ಕೂ ಅನುಕೂಲ ಎಂದು ಹೇಳಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ನನ್ನ ಕ್ಷೇತ್ರ ಬೀಳಗಿ ಅಥವಾ ಹಿಂದಿನ ಕ್ಷೇತ್ರ ಜಮಖಂಡಿಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಬಿಎಸ್‌ವೈ ಅವರು ಇನ್ನೂ ತೀರ್ಮಾನಿಸಿಲ್ಲ.
– ಮುರುಗೇಶ್‌ ನಿರಾಣಿ, ಮಾಜಿ ಸಚಿವ

ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದರೆ ಆ ಭಾಗದಲ್ಲಿ ರಾಜಕೀಯ ಸ್ವತ್ಛವಾಗುತ್ತದೆ. ಇದಕ್ಕಿಂತ ಹೆಚ್ಚೇನೂ ನಾನು ಹೇಳುವುದಿಲ್ಲ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಉತ್ತರಕ್ಕೆ ಸಿದ್ದು ಕರೆದ ತಿಮ್ಮಾಪುರ
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಹೆಸರು ಈಗ ಉತ್ತರದ ಕಡೆ ಕೇಳಿಬರುತ್ತಿದೆ. ಇದರ ಜತೆಯಲ್ಲೇ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು, ಸಿದ್ದರಾಮಯ್ಯ ಅವರಿಗೆ ನೇರ ಆಹ್ವಾನ ನೀಡಿದ್ದು, ಉತ್ತರಕ್ಕೇ ಬಂದು ಸ್ಪರ್ಧಿಸಿ ಎಂದು ಮನವಿ ಮಾಡಿದ್ದಾರೆ. ಇದು ಉತ್ತರ ಕರ್ನಾಟಕದ ಕಾರ್ಯಕರ್ತರ ಆಶಯವಾಗಿದೆ. 

ಬಾಗಲಕೋಟೆ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಬೇಕಾದರೂ ನಿಲ್ಲಲಿ, ಅತ್ಯಧಿಕ ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ಈ ಹಿಂದೆ ಕೂಡ ‌ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಪ್ಪಳ ಅಥವಾ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧಿಸುವಂತೆ  ಕಾಂಗ್ರೆಸ್‌ನ ಆ ಭಾಗದ ಮುಖಂಡರು ಒತ್ತಡ ಹೇರಿದ್ದರು. ಇದೇ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಈ ಹಿಂದೆಯೇ ಹುಬ್ಬಳ್ಳಿಯಲ್ಲಿ ಮನೆ ಮಾಡಿ, ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಆ ಭಾಗದಲ್ಲಿ ಸುತ್ತಾಟ ನಡೆಸಿ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next